ಆರೋಗ್ಯ ವಿವಿ ಕಾಮಗಾರಿಗೆ ರೈತರ ವಿರೋಧಿಸಿ ಪ್ರತಿಭಟನೆ
KannadaprabhaNewsNetwork | Published : Nov 04 2023, 12:31 AM IST
ಆರೋಗ್ಯ ವಿವಿ ಕಾಮಗಾರಿಗೆ ರೈತರ ವಿರೋಧಿಸಿ ಪ್ರತಿಭಟನೆ
ಸಾರಾಂಶ
ರಾಮನಗರ: ನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸಂಕೀರ್ಣ ಕಾಮಗಾರಿ ವೇಳೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ರೈತರು ಅಡ್ಡಿ ಪಡಿಸಿದ್ದಾರೆ.
ರಾಮನಗರ: ನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿ ಉದ್ದೇಶಿತ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸಂಕೀರ್ಣ ಕಾಮಗಾರಿ ವೇಳೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ರೈತರು ಅಡ್ಡಿ ಪಡಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆಗಳನ್ನು ರೈತರು ನೆಲಕ್ಕುರುಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ನಂತರ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದೂವರೆ ದಶಕದಿಂದ ನನೆಗುದಿಗೆ ಬಿದ್ದಿದ್ದ ವಿವಿ ನಿರ್ಮಾಣ ಕಾಮಗಾರಿ ಕಾನೂನು ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಇದೀಗ ಕೆಲಸ ಆರಂಭಿಸಿತ್ತು. ಆದರೆ ಮತ್ತೆ ರೈತರು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ಪ್ರಾರಂಭಿಸಿ ಕಾಮಗಾರಿ ಸ್ಥಗಿತಗೊಳ್ಳುವಂತಾಗಿದೆ. ಪ್ರಸ್ತುತ ಮಾರುಕಟ್ಟೆ ಬೆಲೆ, ಹೊಸ ಭೂ ಸ್ವಾಧೀನ ಕಾಯ್ದೆ ಪ್ರಕಾರ ನಮಗೆ ಪರಿಹಾರ ಕೊಡಬೇಕು. ಅಲ್ಲಿವರೆಗೆ ಕಾಮಗಾರಿ ಪ್ರಾರಂಭಿಸಲು ಅವಕಾಶ ನೀಡುವುದಿಲ್ಲ. ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ. ಮುಂದೆ ಅನಾಹುತ ಸಂಭವಿಸಿದರೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು. ವಿವಿಗೆ ಜಮೀನು ನೀಡಿದವರಿಗೆ ಸೈಟ್ , ಸರ್ಕಾರಿ ಉದ್ಯೋಗ ಕೊಡುತ್ತೇವೆಂದು ಹೇಳಿದ್ದರು. ಕಡಿಮೆ ಬೆಲೆ ನಿಗದಿ ಮಾಡಿ ನಮಗೆ ಅನ್ಯಾಯ ಮಾಡಿದ್ದಾರೆ. ಜಮೀನು ವಿವಾದ ನ್ಯಾಯಾಲಯದಲ್ಲಿದೆ. ನಾವು ಯಾರೂ ಈವರೆಗೆ ಪರಿಹಾರ ತೆಗೆದುಕೊಂಡಿಲ್ಲ. ಇಂದಿನ ಮಾರುಕಟ್ಟೆ ದರದನ್ವಯ ಪರಿಹಾರ ನೀಡಬೇಕು. ಇಲ್ಲದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ದಾಖಲೆಗಳಲ್ಲಿ ಮಾತ್ರ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಭೌತಿಕವಾಗಿ ಇಲ್ಲಿಗೆ ಬಂದು ಸರ್ವೆ ಮಾಡಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಂಡಿಲ್ಲ. 15 ವರ್ಷದಿಂದ ಹೋರಾಟ ಮಾಡುತ್ತಲೇ ಇದ್ದೇವೆ. ನಮಗೆ ನ್ಯಾಯ ದೊರೆತಿಲ್ಲ. ಯಾವ ಸರ್ಕಾರವೂ ನಮಗೆ ನ್ಯಾಯ ಕೊಟ್ಟಿಲ್ಲ. ನಮ್ಮನ್ನು ನಿರ್ಲಕ್ಷ್ಯ ಮಾಡಿ, ಬೀದಿಗೆ ತಳ್ಳಿದ್ದಾರೆ. ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ. ಇದೀಗ ಅಕ್ರಮವಾಗಿ ಕಾಮಗಾರಿ ಕೈಗೊಂಡಿದ್ದು, ನಮ್ಮ ಬೆಳೆಗಳನ್ನು ಹಾಳು ಮಾಡುತ್ತಿದ್ದಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ರೈತರೊಂದಿಗೆ ಚರ್ಚಿಸುತ್ತೇನೆ: ಇಕ್ಬಾಲ್ ಹುಸೇನ್ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಸೇರಿದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ರೈತರು ಅಡ್ಡಿ ಪಡಿಸಿರುವುದು ಗಮನಕ್ಕೆ ಬಂದಿದೆ. ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದಾಗ ವಿವಿಯ ನಿರ್ಮಾಣ ಕಾರ್ಯ ನಿಲ್ಲಿಸುವುದಾಗಿ ಭರವಸೆ ನೀಡಿ ಕಳುಹಿಸಿದ್ದಾರೆಂದು ಗೊತ್ತಾಗಿದೆ. ಆ ಅಪರ ಜಿಲ್ಲಾಧಿಕಾರಿಗೆ ಎಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ ಎಂಬುದರ ಅರಿವಿಲ್ಲ. ವಿವಿ ಬಗ್ಗೆ ಎಳ್ಳಷ್ಟು ಜ್ಞಾನವಿಲ್ಲದೆ ಅವಿವೇಕದಿಂದ ಮಾತನಾಡಿದ್ದಾರೆ. ವಿವಿ ಸ್ಥಾಪನೆಗಾಗಿ ಅನೇಕರ ಹೋರಾಟ ಶ್ರಮ ಇದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ರವರು ರೈತರ ಪರವಾಗಿದ್ದಾರೆ. ರೈತರೊಂದಿಗೆ ಭಾನುವಾರ ಚರ್ಚೆ ನಡೆಸಿ ಅವರು ಏನನ್ನು ನಿರೀಕ್ಷೆ ಮಾಡುತ್ತಿದ್ದಾರೊ ಅದನ್ನು ಈಡೇರಿಸುತ್ತೇವೆ. ವಿವಿ ನಿರ್ಮಾಣ ಆಗಬೇಕೆಂಬುದಷ್ಟೇ ನಮ್ಮ ಉದ್ದೇಶ. - ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ. 3ಕೆಆರ್ ಎಂಎನ್ 4,5.ಜೆಪಿಜಿ 4.ರೈತರು ಪ್ರತಿಭಟನೆ ನಡೆಸುತ್ತಿರುವುದು. ------------------------------