ಸಾರಾಂಶ
ಇಂತಹ ಘಟನೆಗಳು ಜನರಲ್ಲಿನ ಪ್ರಜಾಪ್ರಭುತ್ವದ ಮೇಲಿನ ಗೌರವ ಮತ್ತು ಜವಾಬ್ದಾರಿಗೆ ಧಕ್ಕೆ ಉಂಟು ಮಾಡುತ್ತದೆ
ಹರಪನಹಳ್ಳಿ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಚಪ್ಪಲಿ ಎಸೆದ ಕೃತ್ಯವನ್ನು ಖಂಡಿಸಿ ಹಾಗೂ ಈ ಕೃತ್ಯ ಮಾಡಿದ ವಕೀಲ ರಾಕೇಶ ಕಿಶೋರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಎಐಎಲ್ ಯು ಹಾಗೂ ಐಎಎಲ್ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿಯವರಿಗೆ ಗುರುವಾರ ಮನವಿ ಸಲ್ಲಿಸಿದರು.ಇಂತಹ ಘಟನೆಗಳು ಜನರಲ್ಲಿನ ಪ್ರಜಾಪ್ರಭುತ್ವದ ಮೇಲಿನ ಗೌರವ ಮತ್ತು ಜವಾಬ್ದಾರಿಗೆ ಧಕ್ಕೆ ಉಂಟು ಮಾಡುತ್ತದೆ. ಜನತೆಯ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ರಕ್ಷಿಸಲು ಸ್ಥಾಪಿಸಲಾದ ಸಂವಿಧಾನಿಕ ಸಂಸ್ಥೆಗಳ ಮೇಲೆ ಈ ರೀತಿ ದಾಳಿಗಳಾದಾಗ ಅದರ ಗೌರವಕ್ಕೆ ದಕ್ಕೆ ಬರುತ್ತದೆ ಹಾಗೂ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಜನರು ಇಟ್ಚಿರುವ ನಂಬಿಕೆಯನ್ನು ಬುಡಮೇಲು ಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕೃತ್ಯವನ್ನು ಭಿನ್ನಾಭಿಪ್ರಾಯದ ಒಂದು ಭಾಗವೆಂದು ಹೇಳಲು ಸಾಧ್ಯವಿಲ್ಲ. ಇದು ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಯಾಗಿದೆ. ದೇಶದ ಜನರು ಇಂತಹ ವಿಭಜನಕಾರಿ ಕೃತ್ಯಗಳನ್ನು ತಿರಸ್ಕರಿಸಬೇಕು. ನ್ಯಾಯಾಂಗದ ಬಗ್ಗೆ ಗೌರವ ಎತ್ತಿ ಹಿಡಿಯಬೇಕು. ಸಾಂವಿಧಾನಿಕ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಇಂತಹ ಘಟನೆ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಘಟನೆಯ ಮುಖಂಡರಾದ ಬಸವರಾಜ ಸಂಗಪ್ಪನವರ್, ಚಂದ್ರನಾಯ್ಕ, ಕೊಟ್ರೇಶನಾಯ್ಕ, ಕರಿಬಸಪ್ಪ, ಚಂದ್ರಪ್ಪ, ಎನ್.ರಘುನಾಯ್ಕ ಇದ್ದರು.