ಪಿಡಿಒ ಶೋಭಾರಾಣಿ ವರ್ಗಾವಣೆ ಮಾಡುವಂತೆ ಪ್ರತಿಭಟನೆ

| Published : Dec 13 2024, 12:46 AM IST

ಪಿಡಿಒ ಶೋಭಾರಾಣಿ ವರ್ಗಾವಣೆ ಮಾಡುವಂತೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಟಿ.ಬೇಗೂರು ಗ್ರಾಮಪಂಚಾಯಿತಿ ಕಚೇರಿಯ ಆವರಣದಲ್ಲಿ ಅಧ್ಯಕ್ಷೆ ಮಮತಾ ರವಿಕುಮಾರ್ ಸೇರಿದಂತೆ 14 ಜನ ಸದಸ್ಯರು ರಾಜೀನಾಮೆ ಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಟಿ.ಬೇಗೂರು ಗ್ರಾಮ ಪಂಚಾಯಿತಿಗೆ ಪಿಡಿಒ ಶೋಭಾರಾಣಿ ಬಂದ ನಂತರ ಗ್ರಾಮಗಳ ಒಂದು ಕೆಲಸವಾಗಿಲ್ಲ, ಸದಸ್ಯರಿಗೆ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು, ಆದ್ದರಿಂದ ಎಲ್ಲಾ ಸದಸ್ಯರು ರಾಜೀನಾಮೆಗೆ ನಿರ್ಧರಿಸಿದ್ದೇವೆ ಎಂದು ಟಿ.ಬೇಗೂರು ಗ್ರಾಪಂ ಅಧ್ಯಕ್ಷೆ ಮಮತ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಟಿ.ಬೇಗೂರು ಗ್ರಾಮಪಂಚಾಯಿತಿ ಕಚೇರಿಯ ಆವರಣದಲ್ಲಿ ಅಧ್ಯಕ್ಷೆ ಮಮತಾ ರವಿಕುಮಾರ್ ಸೇರಿದಂತೆ 14 ಜನ ಸದಸ್ಯರು ರಾಜೀನಾಮೆ ಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.

ಪಿಡಿಒ ಶೋಭಾರಾಣಿ ಅಧ್ಯಕ್ಷರು, ಸದಸ್ಯರಿಗೆ ಗೌರವ ನೀಡದೆ ಕಚೇರಿಗೆ ಬಂದರೆ ಶನಿಗಳು, ಪೀಡೆಗಳು ಸೇರಿದಂತೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇವರು ಬಂದ ನಂತರ ಗ್ರಾಮಗಳ ಚರಂಡಿ ಸ್ವಚ್ಛತೆ, ವಿದ್ಯುತ್ ದೀಪ, ನೀರಿನ ವ್ಯವಸ್ಥೆಗೆ ಸ್ಪಂದನೆ ಸಿಗುತ್ತಿಲ್ಲ, ವಾರ್ಡ್‍ಸಭೆ, ಗ್ರಾಮಸಭೆಗಳಾಗಿಲ್ಲ. 2 ಬಾರಿ ಅಮಾನತ್ತು ಆಗಿ ಮತ್ತೆ ಇದೇ ಪಂಚಾಯಿತಿಗೆ ಬಂದಿದ್ದಾರೆ. ಒಂದು ವೇಳೆ ಈಗ ಮೇಲಾಧಿಕಾರಿಗಳು ಪಿಡಿಒರನ್ನು ವರ್ಗಾವಣೆ ಮಾಡದಿದ್ದರೆ 18 ಜನ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದರು.

ಉಪವಾಸ ಸತ್ಯಾಗ್ರಹ:

ಗ್ರಾಪಂ ಸದಸ್ಯ ವೆಂಕಟೇಶ್ ಮಾತನಾಡಿ, ಭ್ರಷ್ಟ ಪಿಡಿಒ ಪ್ರಾಮಾಣಿಕರು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿರುವುದು ಖಂಡನೀಯ. ಅವರು ಭ್ರಷ್ಟ ಪಿಡಿಒಗಳಿಗೆ ಮಾತ್ರ ಬೆಂಬಲ ನೀಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಅವರು ಮಾತನಾಡುವ ಮೊದಲು ಅವರ ಪಕ್ಷದ ಸದಸ್ಯರನ್ನು ತಿಳಿದುಕೊಳ್ಳಲಿ, ಇಂತಹ ಭ್ರಷ್ಟ ಪಿಡಿಒ ವರ್ಗಾವಣೆ ಆಗಲೇಬೇಕು ಎಂದು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಟ್ಟಾಗಿ ಮನವಿ ಸಲ್ಲಿಸಿದ್ದೇವೆ. ಇಂತಹ ಪಿಡಿಒ ವರ್ಗಾವಣೆ ಆಗದಿದ್ದರೆ ರಾಜಿನಾಮೆ ನೀಡಿ ಉಪವಾಸ ಸತ್ಯಾಗ್ರಹವನ್ನು ಇಒ ಕಚೇರಿಯ ಬಳಿ ಮಾಡಲಾಗುತ್ತದೆ ಎಂದರು.

ಗ್ರಾ.ಪಂ. ಸದಸ್ಯೆ ಆಶಾ ಮಾತನಾಡಿ, ನಾನು ಪರಿಶಿಷ್ಟಜಾತಿ ಸಮುದಾಯದ ಮಹಿಳೆಯಾಗಿ ನನಗೂ ಪಿಡಿಒ ಸ್ಪಂದನೆ ನೀಡುತ್ತಿಲ್ಲ, ಅವರ ಬಳಿ ಹೋಗಿ ಮಾತನಾಡಲು ಭಯವಾಗುತ್ತಿದೆ. ಸುಖಾ ಸುಮ್ಮನೆ ಸದಸ್ಯರ ಮೇಲೆ ಜಾತಿನಿಂದನೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಉಪಾಧ್ಯಕ್ಷ ಮಂಜುನಾಥ್ ಬಿ.ಆರ್., ಸದಸ್ಯರಾದ ಗಣೇಶ್, ಶ್ರೀನಿವಾಸ್, ಯಶೋದಮ್ಮ, ಆಶಾಕುಮಾರ್, ಪ್ರಕಾಶ್, ರತ್ನಮ್ಮ ಮರಿಸಿದ್ದಯ್ಯ, ಜಗದೀಶ್, ವಸಂತಕುಮಾರ್, ಕಲಾವತಿ, ಆರ್.ಮಂಜುನಾಥ್, ರತ್ನಮ್ಮ ಮುನಿರಾಜು, ವೆಂಕಟೇಶ್ ಮತ್ತಿತರರಿದ್ದರು.