ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಘಟನೆಗಳನ್ನು ಖಂಡಿಸಿ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ತ್ವರಿತ ವಿಚಾರಣೆ, ಹೆಚ್ಚಿನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಸ್ಥಾಪನೆ ಹಾಗೂ ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ದುಡಿಯುವ ಮಹಿಳೆಯರ ಹೋರಾಟ ಸಮನ್ವಯ ಸಮಿತಿ (ಸಿಐಟಿಯು ಸಂಯೋಜಿತ) ಜಿಲ್ಲಾ ಘಟನದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಮಿತಿ ಪದಾಧಿಕಾರಿ, ಸದಸ್ಯರು ಪ್ರತಿಭಟಿಸಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತದ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ದೇಶದ ಹಲವೆಡೆ ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನೀತಿಯಿಂದ ಭಯಭೀತರಾಗಿದ್ದಾರೆ. ಮಹಿಳೆಯರಿಗೆ ಸುರಕ್ಷತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಕೊಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ, ಹತ್ಯೆ, ಮಹಾರಾಷ್ಟ್ರದ ಬದ್ಲಾಪುರ ಠಾಣೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ, ಉತ್ತರಪ್ರದೇಶ ನರ್ಸ್ ಮೇಲೆ ಅತ್ಯಾಚಾರ, ಕೊಲೆ, ಉತ್ತರಾಖಂಡ್ ಡೆಹ್ರಾಡೂನ್ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ಹೀಗೆ ದೇಶದ ನಾನಾ ಭಾಗಗಳಲ್ಲಿ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು.ಆರ್ ಜಿಕರ್ ಪ್ರಕರಣದಲ್ಲಿ ಕೊಲ್ಕತ್ತಾದ ವೈದ್ಯೆಗೆ ನ್ಯಾಯ ದೊರೆಯಲು ನಿಷ್ಪಕ್ಷಪಾತ, ತ್ವರಿತ ವಿಚಾರಣೆ ನಡೆಸಬೇಕು. ಪ್ರಕರಣದ ಭಾಗಿಯಾದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಿಬೇಕು. ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರ ಮಾನಸಿಕ ಆರೋಗ್ಯಕ್ಕೆ ಕಾಳಜಿ ವಹಿಸಬೇಕು. ಪುನರ್ವಸತಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಬೇಕು. ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸು ಜಾರಿಗೊಳಿಸಬೇಕು. ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಜತೆಗೆ ಕುಡಿಯುವ ನೀರು, ಕಾವಲು ವ್ಯವಸ್ಥೆ, ರಾತ್ರಿ ಸುರಕ್ಷತೆಗೆ ಸಾರಿಗೆ ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿದರು.
ವೈದ್ಯರ, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆ ಸುರಕ್ಷತೆ ಖಾತರಿಪಡಿಸಬೇಕು. ಮಹಿಳಾ ಸಬಲೀಕರಣಕ್ಕೆ ರೂಪಿಸಲಾದ ಕಾರ್ಯಕ್ರಮ, ಕಾನೂನುಗಳನ್ನು ಪರಿಣಾಮಕಾರಿ ಜಾರಿಗೊಳಿಸಬೇಕು ಹಾಗೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮಿಸಲಿಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷೆ ಎಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕೆ.ಜಿ ವೀರೇಶ, ಸರೋಜಾ, ವಿರುಪಮ್ಮ ಪಾಲ್ಗೊಂಡಿದ್ದರು.