ಸಮಾಜದಲ್ಲಿ ಕೋಮು ಪ್ರಚೋದನೆ, ದ್ವೇಷ ಭಾಷಣ, ಗಲಭೆ ಸೃಷ್ಟಿ ಹಾಗೂ ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಸಿರುವ ಪುನರಾವರ್ತಿತ ಅಪರಾಧಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದನ್ನು ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಮಾಜದಲ್ಲಿ ಕೋಮು ಪ್ರಚೋದನೆ, ದ್ವೇಷ ಭಾಷಣ, ಗಲಭೆ ಸೃಷ್ಟಿ ಹಾಗೂ ಗೋ ರಕ್ಷಣೆ ಹೆಸರಿನಲ್ಲಿ ಗೂಂಡಾಗಿರಿ ನಡೆಸಿರುವ ಪುನರಾವರ್ತಿತ ಅಪರಾಧಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದನ್ನು ವಿರೋಧಿಸಿ ಎಸ್‌ಡಿಪಿಐ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ನಿಲುವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಎಸ್‌ಡಿಪಿಐ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ, ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಕೋಮು ಪ್ರಚೋದನೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಮುಸ್ಲಿಂ ಸಮುದಾಯದ ಶೇ.95ರಷ್ಟು ಮತವನ್ನು ಪಡೆದಿತ್ತು. ಆದರೆ, ಇಂದು ದಾವಣಗೆರೆ ಉಪಚುನಾವಣೆ ಬಳಿಕ ಮುಸಲ್ಮಾನರು ಒಂದು ಕಡೆ ಒಂದಾಗುವ ಸಂದರ್ಭದಲ್ಲಿ ಸುಮಾರು 19 ಸಾವಿರ ಮತವನ್ನು ಎಸ್‌ಡಿಪಿಐ ಪಡೆದ ಬಳಿಕ ಕಾಂಗ್ರೆಸ್ ಓಲೈಕೆ ರಾಜಕೀಯಕ್ಕೆ ಮುಂದಾಗಿದೆ ಎಂದು ದೂರಿದರು.

ಬಿಜೆಪಿ ಶವದ ಮೇಲಿನ ರಾಜಕೀಯ ಮತ್ತು ಕೋಮು ದ್ವೇಷದ ರಾಜಕೀಯ ಮಾಡಿ ಮುಸಲ್ಮಾನರು ಹಾಗೂ ದಲಿತರ ಜನಾಂಗದ ಆಹಾರ, ಉಡುಪು ವಿರುದ್ಧ ಮಾತನಾಡಿಕೊಂಡು ಕೋಮು ಪ್ರಚೋದನೆ ಮಾಡುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಸಚಿವ ಸಂಪುಟ ಸಭೆಯಲ್ಲಿ ಕೋಮು ದ್ವೇಷ ಭಾಷಣ ಮಾಡಿದ 18-20 ಮಂದಿಯ ಪ್ರಕರಣವನ್ನು ಹಿಂಪಡೆಯಲಾಗಿದೆ. ವಾಟಳ್ ನಾಗರಾಜ್‌ನಂತಹ ಹೋರಾಟಗಾರರ ಪ್ರಕರಣ ಹಿಂಪಡೆದಿರುವುದು ಸ್ವಾಗತಾರ್ಹ. ಆದರೆ, ಕೋಮು ದ್ವೇಷ ಹರಡುವವರ ಪ್ರಕರಣ ಹಿಂಪಡೆದಿರುವುದನ್ನು ಖಂಡಿಸುತ್ತೇವೆ. ಕೂಡಲೇ ಮತ್ತೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ನಗರಸಭೆ ಸದಸ್ಯರಾದ ಮನ್ಸೂರ್ ಆಲಿ, ಮೇರಿ ವೇಗಸ್, ಬಶೀರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.