ಸಾರಾಂಶ
ಸಹಕಾರ ಸಂಘಗಳ ಉಪನಿಬಂಧಕರು ಅಧಿಕಾರ ದುರ್ಬಳಸಿಕೊಂಡು ಹಾಲು ಉತ್ಪಾದಕರಿಗೆ ಮತ್ತು ಸಂಘಗಳಿಗೆ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘಟನೆ ಮುಖಂಡರು, ಹಾಲು ಉತ್ಪಾದಕ ರೈತರು, ಮಹಿಳೆಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಸಹಕಾರ ಸಂಘಗಳ ಉಪನಿಬಂಧಕರು ಅಧಿಕಾರ ದುರ್ಬಳಸಿಕೊಂಡು ಹಾಲು ಉತ್ಪಾದಕರಿಗೆ ಮತ್ತು ಸಂಘಗಳಿಗೆ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತಸಂಘಟನೆ ಮುಖಂಡರು, ಹಾಲು ಉತ್ಪಾದಕ ರೈತರು, ಮಹಿಳೆಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಚೇರಿಗೆ ಬೀಗ ಜಡಿದು ಗುರುವಾರ ಪ್ರತಿಭಟನೆ ನಡೆಸಿದರು.ಚನ್ನಪಟ್ಟಣ ತಾಲೂಕಿನ ಅಮ್ಮಳ್ಳಿದೊಡ್ಡಿ, ಕೃಷ್ಣಾಪುರ, ಚಿಕ್ಕವಿಠಲೇನಹಳ್ಳಿ, ಸೋಗಾಲಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸಹಾಯಕ ನಿಬಂಧಕ ವೆಂಕಟೇಶ್ ಕಚೇರಿಗೆ ಬಾರದೆ ಸಂಘಗಳ ಕಾರ್ಯಚಟುವಟಿಕೆಗೆ ಸ್ಪಂದಿಸದೆ ರೈತರಿಗೆ ಬಟವಾಡೆ ಮಾಡಲು ಸಹಿ ಹಾಕದೆ ರಾಜಕೀಯ ಒತ್ತಡದಿಂದ ಅಧಿಕಾರ ದುರ್ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಇದರಿಂದ ರೈತರಿಗೆ, ಆಡಳಿತ ಮಂಡಳಿಗಳಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಅಧಿಕಾರಿ ವೆಂಕಟೇಶ್ ಚಿಕ್ಕವಿಠಲೇನಹಳ್ಳಿ, ಸೋಗಾಲಪಾಳ್ಯ ಹಾಲು ಉತ್ಪಾದಕ ಸಂಘದ ನಕಲಿ ರಾಜೀನಾಮೆ ಪಡೆದು ಕಳೆದ ನಾಲ್ಕು ದಿನಗಳಿಂದ ಕಚೇರಿಗೆ ಬಾರದೆ ಹೊರಗಿನಿಂದಲೇ ಸಂಘಗಳಿಗೆ ತೊಂದರೆ ಆಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಅವರು ಕಚೇರಿಗೆ ಬರುವವರೆಗೂ ಕಚೇರಿ ಕೆಲಸ ನಡೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕಚೇರಿಗೆ ಬೀಗ ಜಡಿದು ಘೋಷಣೆ ಕೂಗಿ ಪ್ರತಿಭಟಿಸಿದರು.ಸ್ಥಳಕ್ಕೆ ಆಗಮಿಸಿದ ಐಜೂರು ಸಬ್ ಇನ್ಸ್‌ಪಕ್ಟರ್ ಜಾರ್ಜ ಪ್ರಕಾಶ್ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರೂ ನಮ್ಮ ಬೇಡಿಕೆ ಈಡೇರುವವರೆಗೂ ಬೀಗ ತೆಗೆಯಲ್ಲವೆಂದು ಪಟ್ಟು ಹಿಡಿದರು.
ಆಗ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ತಿಳಿಸಿದರು. ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತರ ಜೊತೆ ಮಾತನಾಡಿದ ನಂತರ ಬಾಗಿಲು ಬೀಗ ತೆಗೆಸಲಾಯಿತು.ಪ್ರತಿಭಟನೆಯಲ್ಲಿ ಚನ್ನಪಟ್ಟಣ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ರೈತ ಸಂಘದ ಮುಖಂಡರಾದ ಅಮ್ಮಳ್ಳಿದೊಡ್ಡಿ ರಮೇಶ್, ಪಾದ್ರಳ್ಳಿ ಕೃಷ್ಣಪ್ಪ, ಪರಮಶಿವಯ್ಯ, ಸೀಬಕಟ್ಟೆ ಕೃಷ್ಣಪ್ಪ, ಶೋಭಾ, ರಘು, ರಾಜು ಮುಂತಾದವರಿದ್ದರು.