ಮುಳಗುಂದ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಒಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಸತಾಯಿಸಿದ ಹೆಸ್ಕಾಂ ಸಿಬ್ಬಂದಿ ವಿರುದ್ಧ ಸ್ಥಳೀಯ ಹಸಿರು ಸೇನೆ ರೈತ ಸಂಘದಿಂದ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಯಿತು.
ಕಳೆದ ಕೆಲ ತಿಂಗಳಿಂದ ಪಟ್ಟಣಕ್ಕೆ ವಿದ್ಯುತ್ ಕೊರತೆಯಾಗುತ್ತಿದ್ದು, ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತವಾಗುತ್ತಿದೆ. ಈಗಂತೂ ಕಳೆದ ಒಂದು ವಾರದಿಂದ ಹೋದ ವಿದ್ಯುತ್ ಮರಳಿ ಬಂದಿಲ್ಲ. ರೈತರ ತೋಟದಲ್ಲಿನ ಬೆಳೆಗಳು ಒಣಗುತ್ತಿವೆ. ವಿದ್ಯುತ್ ಇಲ್ಲದೆ ಮನೆಯಲ್ಲಿ ನಲ್ಲಿಗಳಲ್ಲಿ ನೀರು ಬಂದಿಲ್ಲ.ಹೈನುಗಾರಿಕೆಯ ದನಗಳಿಗೆ ಕುಡಿಸಲು ನೀರಿಲ್ಲ, ಮಳೆ ಗಾಳಿಯ ಸಲುವಾಗಿ ಕಂಬಗಳು ಬಿದ್ದಿದ್ದರಿಂದ ಇಲ್ಲಿ ವರೆಗೆ ನಾವು ಹೇಗೋ ನಿಭಾಯಿಸಿದ್ದೇವೆ. ಆದರೆ ಸುಮ್ಮನೆ ಕುಳಿತ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಕೋಳಿ ಫಾರ್ಮನವರು ಅವರಿಗೆ ದುಡ್ಡು ಕೊಡುತ್ತಾರೆ. ಅವರ ಯಾವ ಕೆಲಸವಿದ್ದರೂ ತಕ್ಷಣ ಮಾಡಿಕೊಡುತ್ತಾರೆ. ನಾವೆಲ್ಲಿಂದ ಕೊಡಬೇಕು. ಗದಗ ಎಇಇ ಅವರಿಗೆ ಹೇಳಿದರೆ ಅಲ್ಲಿ ನಿಮ್ಮ ಸೆಕ್ಸನ್ ಆಫೀಸರಗೆ ತಿಳಿಸಿ ಎಂದು ಹೇಳುತ್ತಾರೆ.
ಅವರಿಗೆ ಹೇಳುವಷ್ಟೂ ಇವರಿಗೆ ಉಳಿದಿಲ್ಲವೇ? ಇದರಲ್ಲಿ ಯಾವದು ದೊಡ್ಡ ಹುದ್ದೆ ಎಂಬುದು ತಿಳಿಯುತ್ತಿಲ್ಲ. ಕಂಬದಲ್ಲಿನ ಒಂದು ಕಪ್ ಹೋಗಿ ತಿಂಗಳುಗಳಾಗಿವೆ. ಒಂದು ಕಪ್ ಹಾಕಲಾರದಷ್ಟು ಇಲಾಖೆ ಬಡವಾಯಿತೇ? ಹೀಗೆ ಹತ್ತು ಹಲವು ಸಮಸ್ಯೆಗಳನ್ನು ರೈತರು ಮುಂದಿಟ್ಟರು.ನಂತರ ಸ್ಥಳಕ್ಕಾಗಮಿಸಿದ ಎಇಇ ನಾಗರಾಜ ಕುರಿಯವರನ್ನು ಸಹ ರೈತರು ತರಾಟೆಗೆ ತಗೆದುಕೊಂಡರು. ನಂತರ ಸಮಜಾಯಿಸಿ ಹೇಳಿದ ಎಂಜಿನೀಯರ್ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ರೈತರ ಸಮಸ್ಯೆಗಳನ್ನು ಸಿಬ್ಬಂದಿಯಿಂದ ಪಟ್ಟಿ ಮಾಡಿಸಿ ಒಂದು ವಾರದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸುವದಾಗಿ ತಿಳಿಸಿದರು.
ಈ ವೇಳೆ ರೈತರಾದ ದೇವರಾಜ ಸಂಗನಪೇಟಿ, ಕಿರಣ ಕುಲಕರ್ಣಿ, ಕಿರಣ ಬಟ್ಟೂರ, ಮಲ್ಲಪ್ಪ ಹೊಸಕಟ್ಟಿ, ಪ್ರಭು ಲದ್ದಿ, ವಿಜಯ ಹುಲಕೋಟಿ, ಕುಮಾರ ಬಟ್ಟೂರ ಇತರರು ಇದ್ದರು.
ವಾರದಲ್ಲಿ ಪರಿಹಾರ: ಕೆಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಇನ್ನೂ ಕೆಲ ಸಮಸ್ಯೆಗಳು ಬಂದಿಲ್ಲ. ಅವುಗಳನ್ನು ಒಂದು ವಾರದಲ್ಲಿ ಬಗೆಹರಿಸುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ತಿಳಿಸಿ ನಾನು ಬಗೆ ಹರಿಸುತ್ತೇನೆ ಎಂದು ಹೆಸ್ಕಾಂ ಎಇಇ ನಾಗರಾಜ ಕುರಿ ತಿಳಿಸಿದರು.