ಸಾರಾಂಶ
ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ತೆರೆ ಮರೆಯಲ್ಲಿ ಗೋ ಬ್ಯಾಕ್ ಶೋಭಾ ಎಂದು ಕರೆ ನೀಡಿದ್ದ ಬಿಜೆಪಿ ಮುಖಂಡರು ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿನಲ್ಲಿ ತೆರೆಯ ಮುಂದೆ ಭಾನುವಾರ ಆಕ್ರೋಶ ಹೊರ ಹಾಕಿದರು.
ಲೋಕಸಭಾ ಟಿಕೆಟ್ ನೀಡದಂತೆ ಆಗ್ರಹ । ಯಡಿಯೂರಪ್ಪ ವಿರುದ್ಧವೂ ಆಕ್ರೋಶ । ಶೋಭಾ ಕರಂದ್ಲಾಜೆ ವಿರುದ್ಧ ದಿಕ್ಕಾರದ ಘೋಷಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ತೆರೆ ಮರೆಯಲ್ಲಿ ಗೋ ಬ್ಯಾಕ್ ಶೋಭಾ ಎಂದು ಕರೆ ನೀಡಿದ್ದ ಬಿಜೆಪಿ ಮುಖಂಡರು ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿನಲ್ಲಿ ತೆರೆಯ ಮುಂದೆ ಭಾನುವಾರ ಆಕ್ರೋಶ ಹೊರ ಹಾಕಿದರು.ಜಿಲ್ಲಾ ಬಿಜೆಪಿ ಕೆಲವು ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಚಿಕ್ಕಮಗಳೂರು ನಗರಸಭೆ ಹಾಲಿ ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು ದಿಢೀರ್ ಧರಣಿ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿ ಬಿಜೆಪಿ ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ ಮುಂದೆ ಹೈ ಡ್ರಾಮ ಮಾಡಿದರು.ಚಿಕ್ಕಮಗಳೂರಿನಲ್ಲಿ ಮೊದಲು ಗೋ ಬ್ಯಾಕ್ ಪತ್ರ ಚಳುವಳಿ ಆರಂಭವಾಗಿದ್ದು ಫೆಬ್ರವರಿ 21 ರಂದು, ಪತ್ರ ಬರೆದವರು ಬಿಜೆಪಿ ಕಾರ್ಯಕರ್ತರಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು. ಇದರ ಹಿಂದೆ ಯಾರಿದ್ದಾರೆಂದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಕೂಡ ಇದೇ ವಿಚಾರದಲ್ಲಿ ಶೋಭಾ ಕರಂದ್ಲಾಜೆ ಪರವಾಗಿ ಮಾತನಾಡಿದ್ದರು.ಅಂದು ಮೌನ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಾಲಯ ಉದ್ಘಾಟನೆಯನ್ನು ಮಾಜಿ ಸಚಿವ ಸಿ.ಟಿ. ರವಿ ನೆರವೇರಿಸಿದ್ದರು. ಆಗ ಜಿಲ್ಲೆಯ ಬಿಜೆಪಿ ಮಾಜಿ ಶಾಸಕರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದೇ ಕಾರ್ಯಕ್ರಮದಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ಘೋಷಣೆ ಮಾಡಲಾಗಿತ್ತು. ಹೀಗೆ ವಿವಿಧ ಜವಾಬ್ದಾರಿಯನ್ನು ಒಪ್ಪಿಕೊಂಡು ಮೌನವಾಗಿಯೇ ಎದ್ದು ಹೋದ ಬಿಜೆಪಿ ಮುಖಂಡರು ಭಾನುವಾರ ದಿಢೀರ್ ತಮ್ಮ ವರಸೆ ಬದಲಾಯಿಸಿದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ, ಶಾಸಕ ಆರಗ ಜ್ಞಾನೇಂದ್ರ, ಸಂಚಾಲಕ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್, ಪಕ್ಷದ ಹಿರಿಯ ಮುಖಂಡ ರಾದ ಗಣೇಶ್‌ರಾವ್ ಅವರು ಬಿಜೆಪಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ನಿರ್ವಹಣಾ ಸಭೆ ಆರಂಭಿಸುತ್ತಿದ್ದಂತೆ ಬಿಜೆಪಿ ಜಿಲ್ಲಾ ಕೇಂದ್ರದ ಮುಖಂಡರು ದಿಢೀರ್ ಸಭೆಯೊಳಗೆ ಎಂಟ್ರಿಯಾದರು.ಗೋ ಬ್ಯಾಕ್ ಶೋಭಾಕ್ಕ ಎಂದು ಏರು ಧ್ವನಿಯಲ್ಲಿ ಸಾಮೂಹಿಕವಾಗಿ ಘೋಷಣೆ ಹಾಕಿದರು. ಧಿಕ್ಕಾರ ಕೂಗಿದರು, ನೋಡು ನೋಡುತ್ತಿದ್ದಂತೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು. ಇದೇ ವೇಳೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಪಕ್ಕ ಎಂಬುದಾಗಿ ಹೇಳಿಕೆ ನೀಡಿರುವ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧವೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಶೋಭಾ ಕರಂದ್ಲಾಜೆಯೊಂದಿಗೆ ಆತ್ಮೀಯರಾಗಿದ್ದು ಅಂದು ಮೌನವಾಗಿದ್ದ ಹಲವು ಮಂದಿ ಬಿಜೆಪಿ ಮುಖಂಡರು ದಿಢೀರ್ ತಮ್ಮ ಆಕ್ರೋಶ ಹೊರ ಹಾಕಿರುವವರ ಗುಂಪಿನಲ್ಲಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಗೋ ಬ್ಯಾಕ್ ಶೋಭಾ ಎಂದು ಕರೆ ಕೊಡುವ ಮೂಲಕ ತೆರೆ ಮರೆಯಲ್ಲಿ ಸಭೆ ನಡೆಸಿದ್ದರೂ ಸಹ ಭಾನುವಾರದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು.ಬೀದಿಗೆ ಬಂದ ವೈಮನಸ್ಸು: ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಗುವುದು ಕಳೆದ ಎರಡು ದಿನಗಳ ಹಿಂದೆ ಪಕ್ಕಾ ಆಗಿದೆ. ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಇದೆ. ಅವರ ಬಗ್ಗೆ ಸಾರ್ವಜನಿಕರು ಅಥವಾ ಬೇರೆ ಪಕ್ಷದವರು ವಿರೋಧ ಮಾಡಿದ್ದರೆ ಅಷ್ಟೇನೂ ಗಂಭೀರವಾಗಿ ಇರುತ್ತಿರಲಿಲ್ಲ. ಬಿಜೆಪಿ ಕಚೇರಿಯಲ್ಲೇ ಅವರದೇ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸುತ್ತಿರುವುದು ನಗೆಪಾಟಲಿಗೆ ಗುರಿಯಾಗಿದೆ. ನಮ್ಮಲ್ಲಿ ಯಾವುದಾದದರೂ ಆಂತರಿಕ ಬಿಕ್ಕಟ್ಟು ಇದ್ದರೆ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳುತ್ತೇವೆ. ಪಕ್ಷ ಹೇಳಿದಂತೆ ಕೇಳುತ್ತೇವೆ. ಕೇಳಬೇಕೆಂದು ಹೇಳುವ ಬಿಜೆಪಿಯಲ್ಲಿ ಈ ರೀತಿ ಬೆಳವಣಿಗೆ ನಡೆಯುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು.ಭಾವನೆಗಳನ್ನು ತಿಳಿಸಲು ಅವಕಾಶ ಇದೆ: ಸಿ.ಟಿ. ರವಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾವನೆಯನ್ನು ತಿಳಿಸಲು ಮಾರ್ಗಗಳು ಬೇರೆ ಬೇರೆ ಇವೆ, ನಮೋ ಆಪ್‌ನಲ್ಲಿ ಜನ್ ಮನ್ ಸರ್ವೆಯಲ್ಲಿ ಕಾರ್ಯಕರ್ತರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅವಕಾಶ ಇದೆ ಮತದಾರರು ಕೂಡ ತಮ್ಮ ಅಭಿಪ್ರಾಯ ಹೇಳಿಕೊಳ್ಳಲು ಅವಕಾಶ ಇದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಡೆಯಿಂದ ಅವರ ಭಾವನೆಯನ್ನು ತಿಳಿಸಲು ಸೇವೆ ವೇದಿಕೆಯನ್ನು ಕಲ್ಪಿಸಿತ್ತು ಪಕ್ಷದ ರಾಜ್ಯ ಉಪಾಧ್ಯಕ್ಷ ಮೈಸೂರಿನ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜು ಅವರು ಅಭಿಪ್ರಾಯ ಸಂಗ್ರಹಿಸಿಕೊಂಡು ಹೋಗಿದ್ದಾರೆ. ಈಗ ನಾವುಗಳು ಒಂದೇ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡ ಬೇಕಾಗಿದೆ. ಮೋದಿ ಮತ್ತೊಮ್ಮೆ, ಬಿಜೆಪಿ ಮತ್ತೆ ಗೆದ್ದು ಬರಬೇಕು ಆ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡ ಬೇಕಾಗಿದೆ ಎಂದರು.
ರಾಷ್ಟ್ರದ ಹಿತರಕ್ಷಣೆಗೋಸ್ಕರ ನಾವು ಎಲ್ಲಾ ವಿಷಯಗಳನ್ನು ಮರೆತು ಒಂದೇ ಧ್ವನಿಯಾಗಿ ನಾವುಗಳು ಕೆಲಸ ಮಾಡ ಬೇಕು. ಬೂತ್‌ನಲ್ಲಿ ಕಮಲವನ್ನು ಅರಳಿಸಬೇಕು, ಮತ್ತೊಮ್ಮೆ ಪ್ರಧಾನಿಯಾಗಲು ಗೆಲ್ಲುವ ವಿಶ್ವಾಸ ಗುರಿಯನ್ನು ಹೊಂದಿದ್ದೇವೆ. ದೇಶದಲ್ಲಿ 400 ಸೀಟ್‌ಗಳು ಮುಟ್ಟಬೇಕಾದರೆ ಕರ್ನಾಟಕ 28 ಸ್ಥಾನಗಳಲ್ಲೂ ಗೆಲ್ಲಬೇಕು. ನಮ್ಮ ಒಡಕಿನ ಲಾಭ ಕಾಂಗ್ರೆಸ್‌ಗೆ ಆಗದಂತೆ ಎಚ್ಚರ ವಹಿಸಬೇಕಾಗಿದೆ. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಬಿಜೆಪಿ ಕಾರ್ಯಕರ್ತರು ಮಾತ್ರ ಅಲ್ಲ ಜೆಡಿಎಸ್‌ನ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಕೆಲಸ ಮಾಡಬೇಕಾಗಿದೆ ಎಂದರು.ದೇಶವನ್ನು ನೋಡಿ ದೇಶದ ನಾಯಕತ್ವವನ್ನು ನೋಡಿ ಯಾರೇ ಅಭ್ಯರ್ಥಿ ಆಗಲಿ ಅವರು ಮೋದಿ ಎನ್ನುವ ಭಾವನೆ ಇಟ್ಟು ಕೊಂಡು ನಾವುಗಳು ಕೆಲಸ ಮಾಡಬೇಕು. ನಮ್ಮ ವೈಮನಸ್ಸು ದೇಶಕ್ಕೆ ಆಪತ್ತು ತರಬಾರದು. ಹಾಗಾಗಿ ನಾವು ಒಂದೇ ಧ್ವನಿಯಾಗಿ ಕೆಲಸ ಮಾಡಬೇಕು. ನನ್ನ ಬಳಿ ವೈಯಕ್ತಿಕವಾಗಿ ಮಾತನಾಡಿದವರಿಗೂ ಕೂಡ ಇದನ್ನೇ ಹೇಳಿದ್ದೇನೆ. ಮೋದಿ ಮತ್ತೊಮ್ಮೆ ಈ ಗುರಿಯನ್ನು ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. 10 ಕೆಸಿಕೆಎಂ 2ಚಿಕ್ಕಮಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಟಿಕೇಟ್ ನೀಡಬಾರದೆಂದು ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು.