ಸಾರಾಂಶ
ಹಿರಿಯರು ಸಂಪೂರ್ಣವಾಗಿ ಏಕದೇವನಿಷ್ಠೆಯುಳ್ಳವರಾಗಿದ್ದರು. ಹೆಣ್ಣು, ಹೊನ್ನು, ಮಣ್ಣು, ಒಡವೆಗಳನ್ನು ಸಂಪಾದಿಸಲಿಲ್ಲ. ಅರಿವನ್ನೇ ಒಡವೆಯನ್ನಾಗಿ ಪಡೆದು ಅನುಭಾವಿಗಳಾದರು ಇದರೊಂದಿಗೆ ಹಳೇ ಬೇರಿನೊಂದಿಗೆ ಹೊಸ ಚಿಗುರು ಅವಶ್ಯಕ
ಹೊಸದುರ್ಗ: ಹಿರಿಯರನ್ನು ಗೌರವಿಸದ ಸಮಾಜ ಎಂದಿಗೂ ಸಂಸ್ಕಾರವಂತ ಸಮಾಜವಾಗಲಾರದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಸಾಣೆಹಳ್ಳಿಯ ಎಸ್.ಎಸ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಳೆ ಬೇರು ಹೊಸ ಚಿಗುರು ದವಸ ಸಮರ್ಪಣೆ ಮತ್ತು ಹಿರಿಯ ಚೇತನಗಳಿಗೆ ಅಭಿನಂದನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.ನಮ್ಮಲ್ಲಿ ಏಕದೇವನಿಷ್ಠೆ ಇಲ್ಲ. ಹಿರಿಯರು ಸಂಪೂರ್ಣವಾಗಿ ಏಕದೇವನಿಷ್ಠೆಯುಳ್ಳವರಾಗಿದ್ದರು. ಹೆಣ್ಣು, ಹೊನ್ನು, ಮಣ್ಣು, ಒಡವೆಗಳನ್ನು ಸಂಪಾದಿಸಲಿಲ್ಲ. ಅರಿವನ್ನೇ ಒಡವೆಯನ್ನಾಗಿ ಪಡೆದು ಅನುಭಾವಿಗಳಾದರು. ವ್ಯಕ್ತಿ ಎಷ್ಟು ದಿನ ಬದುಕಿದ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಎಷ್ಟು ಜನರ ಪ್ರೀತಿ, ವಿಶ್ವಾಸ ಗಳಿಸಿ ಆದರ್ಶವನ್ನಿಟ್ಟುಕೊಂಡಿದ್ದಾನೆ ಎನ್ನುವುದು ತುಂಬಾ ಮುಖ್ಯಎಂದರು.
ಎಲ್ಲರ ಮನೆಗಳಲ್ಲಿ ಹಿರಿಯರನ್ನು ಪ್ರೀತಿ-ವಿಶ್ವಾಸದಿಂದ ಕಾಣಬೇಕು. ಹಿರಿಯರನ್ನು ಗೌರವಿಸಿದರೆ ನಾಳೆ ಮಕ್ಕಳು ನಮ್ಮನ್ನು ಗೌರವಿಸುತ್ತಾರೆ. ಹಿರಿಯರು ಹೇಗೆ ನಡೆದುಕೊಳ್ಳುತ್ತಾರೋ ಹಾಗೆಯೇ ಮಕ್ಕಳು ನಡೆದುಕೊಳ್ಳುವರು. ಆದ್ದರಿಂದ ಮಕ್ಕಳ ಮನಸ್ಸು ಅರಳುವ ಹಾಗೆ ನಡೆದುಕೊಳ್ಳಬೇಕು ಎಂದರು.ಮುಖ್ಯ ಅತಿಥಿಗಳಾಗಿ ನಿವೃತ್ತ ನ್ಯಾ.ಎಚ್.ಬಿಲ್ಲಪ್ಪ ಮಾತನಾಡಿ, ಸತ್ಸಂಗ ಎನ್ನುವುದು ತುಂಬಾ ಶ್ರೇಷ್ಟವಾಗಿರುವಂಥದ್ದು. ಅಂತಹ ಸತ್ಸಂಗದ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
ಅತಿಥಿಗಳಾಗಿ ಚಟ್ನಳ್ಳಿ ಮಹೇಶ್ ಮಾತನಾಡಿ, ಕನ್ನಡ ಸಾಹಿತ್ಯ ಹಿರಿಯರ ಬಗ್ಗೆ ಹೆಚ್ಚು ಮಹತ್ವ ಕೊಟ್ಟಿದೆ. ಹಿರಿಯರನ್ನು ಗೌರವಿಸುವ ಜವಾಬ್ದಾರಿ ಮಠ ಹಾಗೂ ಮನೆಗಳ ಮೇಲಿದೆ. ಇವತ್ತು ಸಾಣೇಹಳ್ಳಿ ಮಠ ಹಿರಿಯರನ್ನು ಗೌರವಿಸುತ್ತಿರುವುದು ಬೇರೆ ಮಠಗಳಿಗೆ ಮಾದರಿಯಾಗಿದೆ ಎಂದರು.ಇದೆ ವೇಳೆ ದವಸ ಸಂಗ್ರಹ ಸಮಿತಿ ಸದಸ್ಯರನ್ನು ಅಭಿನಂದಿಸಲಾಯಿತು. ಸಮಾಜಕ್ಕಾಗಿ ಶ್ರಮಿಸಿ ನಿಧನರಾದ ಹಿರಿಯ ಚೇತನಗಳನ್ನು ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿ ಸ್ಮರಿಸಿಕೊಳ್ಳಲಾಯಿತು.