ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಮಧುಗಿರಿ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ದನಗಳ ಜಾತ್ರೆಗೆ ಬರುವ ಗೋಪಾಲಕರು ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತು ಎಂಎಲ್ಸಿ ಆರ್. ರಾಜೇಂದ್ರರ ಅಭಿಮಾನಿ ಬಳಗದಿಂದ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು ಗೋಪಾಲಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಪುರಸಭೆ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ತಿಳಿಸಿದರು.ಭಾನುವಾರ ಪಟ್ಟಣದ ದಂಡಿಮಾರಮ್ಮ ದೇಗುಲದ ಆವರಣದಲ್ಲಿ ದನಗಳ ಜಾತ್ರೆಯಿದ್ದು, ದನಗಳನ್ನು ಮಾರಾಟ ಮಾಡಲು ಮತ್ತು ಕೊಳ್ಳಲು ಜಾತ್ರೆಗೆ ಕರೆ ತಂದಿರುವ ಗೋಪಾಲಕರಿಗೆ ಉಚಿತ ಊಟ, ಮಜ್ಜಿಗೆ, ನೀರು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಸದಾ ಕಾಲ ಅಧಿಕಾರ ಇರಲಿ, ಇಲ್ಲದಿರಲಿ, ಜಿಲ್ಲೆಯ ರೈತರ , ಕೃಷಿ ಕಾರ್ಮಿಕರ ಬಗ್ಗೆ ಯೋಜನೆ ರೂಪಿಸಿ ಅವುಗಳನ್ನು ಜನತೆಗೆ ಸಮರ್ಥವಾಗಿ ತಲುಪಿಸುವ ಮೂಲಕ ನೊಂದವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ, ಆ ನಿಟ್ಟಿನಲ್ಲಿ ಬರಗಾಲ ಬೆನ್ನತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಗೆ ದನಕರುಗಳನ್ನು ಕರೆತರುವ ರೈತರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಮೂಲೆ ಮೂಲೆಗಳಿಂದ ಬಂದಿರುವ ರೈತರಿಗೆ ದನಗಳ ಜಾತ್ರೆ ಮುಗಿಯುವತನಕ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ. ನಂಜುಂಡರಾಜು ಮಾತನಾಡಿ, ಸಚಿವ ಕೆ.ಎನ್. ರಾಜಣ್ಣನವರು ಈ ಹಿಂದೆ ಬರಗಾಲದ ವೇಳೆ ಗೋಶಾಲೆಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಗೋಪಾಲಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ಕಳೆದ ವರ್ಷ,ಈಗ ಕೂಡ ದನಗಳ ಜಾತ್ರೆಗೆ ಬರುವ ಗೋಪಾಲಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದು, ಅಂಗಡಿ - ಮುಂಗಟ್ಟುಗಳಿಗೂ ಯಾವುದೇ ರೀತಿಯ ಸುಂಕ ವಿಧಿಸಿಲ್ಲ, ಇದು ಬಡವರಿಗೆ ವರವಾದ ಕೆಲಸ ಎಂದರು.
ದನಗಳ ಜಾತ್ರೆಗೆ ಬಂದಿದ್ದ ಗೋಪಾಲಕ ರಾಮಣ್ಣ ಮಾತನಾಡಿ, ಸಚಿವ ರಾಜಣ್ಣ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಪುರಸಭೆ ಸದಸ್ಯ ಸಾಧಿಕ್, ಮಾಜಿ ಅಧ್ಯಕ್ಷ ಅಯೂಬ್, ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ್,ಲಿಂಗೇನಹಳ್ಳಿ ಆನಂದ್, ಲಾಜಿಬಾಬು,ಮಾರುತಿ, ರಂಗನಾಯ್ಕ್, ಬಾಲಾಜಿ,ಪಶು ಸಂಗೋಪನಾ ಇಲಾಖೆ ನಿವೃತ್ತ ಅಧಿಕಾರಿ ಗೋವಿಂದಪ್ಪ,ಗಂಗರಾಜು, ಮನು,ವಿಶ್ವನಾಯ್ಕ,ಬಾಲಾಜಿ,ಮಂಜುನಾಥ್,ಶಿವಣ್ಣ, ಆನಂದ್ ಸೇರಿದಂತೆ ಕೆಎನ್‌ಆರ್. ಹಾಗೂ ಆರ್ ಆರ್ ಅಭಿಮಾನಿ ಬಳಗದವರು ಇದ್ದರು.