ಹಿರಿಯೂರಿನ ಧರ್ಮಪುರದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

| Published : Mar 11 2024, 01:20 AM IST

ಸಾರಾಂಶ

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ ಜೆಜೆ ಹಟ್ಟಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿದ್ದು, ಭಾನುವಾರ ತಾಲೂಕಿನ ಧರ್ಮಪುರದಲ್ಲಿ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಹಿರಿಯೂರು: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ ಜೆಜೆ ಹಟ್ಟಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಂಡಿದ್ದು, ಭಾನುವಾರ ತಾಲೂಕಿನ ಧರ್ಮಪುರದಲ್ಲಿ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಯಾವುದೇ ಕಾರಣದಿಂದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸಿದರು.

ಈ ವೇಳೆ ಪ್ರತಿಭಟಾಕಾರರನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡ ರವಿಶಂಕರ್, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮಲ್ಲೇ ಸಮರ್ಥ ನಾಯಕ, ಸ್ಥಳೀಯ ಹಾಗೂ ಸರ್ವ ಜನಾಂಗದ ಮುಖಂಡ ಜೆಜೆ ಹಟ್ಟಿ ತಿಪ್ಪೇಸ್ವಾಮಿ ಇದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡಿದ್ದಾರೆ. 1990ರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ. ಮತ್ತೊಮ್ಮೆ ಅವರಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಜಯಭೇರಿ ಸಾಧಿಸಲು ಅವಕಾಶ ಮಾಡಿಕೊಡಬೇಕೆಂದರು.

ಕಾಂಗ್ರೆಸ್ ಪಕ್ಷಮ ಮೊದಲಿನಿಂದಲೂ ಹೊರಗಿನವರಿಗೆ ಮಣೆ ಹಾಕುತ್ತಾ ಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಂಸದರಾಗುವ ಅರ್ಹತೆ ಇಲ್ಲದವರು ಯಾರೂ ಇಲ್ಲವೆಂದು ಭಾವಿಸಿದಂತಿದೆ. ಇದು ಚಿತ್ರದುರ್ಗ ಜಿಲ್ಲೆಗೆ ಮಾಡಿದ ಘೋರ ಅವಮಾನವಾಗಿದೆ. ಹೊರಗಿನಿಂದ ಬರುವ ವ್ಯಕ್ತಿಗಳು ಗೆದ್ದು ಬೀಗುತ್ತಾರೆಯೇ ವಿನಹ ಅಭಿವೃದ್ಧಿ ಕಡೆ ಗಮನ ಹರಿಸುವುದಿಲ್ಲ. ಚುನಾವಣೆ ಹತ್ತಿರ ಬಂದಾಗ ಕೆಲ ಮಧ್ಯವರ್ತಿಗಳ ಹಿಡಿದುಕೊಂಡು ಜಿಲ್ಲೆಯಲ್ಲಿ ತಳವೂರಲು ಯತ್ನಿಸುತ್ತಾರೆಂದು ಆರೋಪಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜಿಲ್ಲೆ ಜನರಿಗೆ ಉತ್ತಮ ಅಭಿಪ್ರಾಯವಿದೆ. ಹೊರಗಿನವರಿಗೆ ಟಿಕೆಟ್ ನೀಡಿ ಅಸಮಾಧಾನಕ್ಕೆ ಕಾರಣವಾಗುವುದು ಬೇಡ. ಹಾಗಾಗಿ ಹೊರಗಿನವರಿಗೆ ಬಿಟ್ಟು ಸ್ಥಳೀಯರಿಗೆ ಅವಕಾಶ ಕೊಡಬೇಕು. ಹಾಗೊಂದು ವೇಳೆ ಹೊರಗಿನವರಿಗೆ ಟಿಕೆಟ್ ನೀಡಿದರೆ ಪಕ್ಷದ ಅಭ್ಯರ್ಥಿ ಸೋಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾದಿಗ ಯುವಸೇನೆ ಹೋಬಳಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಕಳೆದ ಎರಡು ಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾದಿಗ ಜನಾಂಗ ಅಲ್ಲದ ವ್ಯಕ್ತಿಗೆ ಟಿಕೆಟ್ ಕೊಟ್ಟಿದ್ದಾರೆ. ಮಾದಿಗ ಜನಾಂಗದ ಹೆಸರು ಹೇಳಿಕೊಂಡು ಅನೇಕ ಹುದ್ದೆಗಳನ್ನು ಪಡೆದುಕೊಂಡು ಸ್ಥಳೀಯ ಮಾದಿಗ ಜನಾಂಗದವರನ್ನು ತುಳಿಯುತ್ತಾ ಬಂದಿದ್ದಾರೆ. ಈ ಬಾರಿ ಸ್ಥಳೀಯ ನಾಯಕ ಮಾದಿಗ ಜನಾಂಗದ ಜೆಜೆ ಹಟ್ಟಿ ತಿಪ್ಪೇಸ್ವಾಮಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ರವಿಶಂಕರ್, ಕೃಷ್ಣಪುರ ರಂಗಸ್ವಾಮಿ, ಬಾಬು, ನಾಗರಾಜ್, ರಂಗೇನಹಳ್ಳಿ ಸಂತೋಷ, ಮುರುಳಿ, ಗ್ರಾಪಂ ಮಾಜಿ ಸದಸ್ಯ ಶಿವಲಿಂಗಪ್ಪ, ಅಕ್ಬರ್, ಜಮೀರ್, ಅಮೀರ್ ಭಾಷಾ, ನಿರಂಜನ್, ಸ್ವಾಮಿ, ಗಿರೀಶ್, ರಂಗಸ್ವಾಮಿ, ದೇವರಾಜ್, ಹಳ್ಳಪ್ಪ, ಪಿ.ಡಿ.ಕೋಟೆ ಮೂರ್ತಿ, ಬೆಟಗೊಂಡನಹಳ್ಳಿ ಭೂತರಾಯ ಪ್ರತಿಭಟನೆ ನೇತೃತ್ವವಹಿಸಿದ್ದರು.