ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪಾಠಗಳ ವಿಳಂಬ ಖಂಡಿಸಿ ಪ್ರತಿಭಟನೆ

| Published : Nov 24 2023, 01:30 AM IST

ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪಾಠಗಳ ವಿಳಂಬ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನಲ್ಲಿ ಸುಮಾರು 150ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ವಾರಕ್ಕೆ 2400 ಗಂಟೆ ತರಗತಿಗಳು ನಡೆಯಬೇಕಿದೆ. ಆದರೆ ನಡೆಯುತ್ತಿಲ್ಲ. ಹೀಗಾದರೆ ನಮ್ಮ ವಿದ್ಯಾಭ್ಯಾಸದ ಕತೆ ಏನು ಎಂದು ಪ್ರಶ್ನಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಅನಂತರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರಿಯಾದ ಸಮಯಕ್ಕೆ ಶೈಕ್ಷಣಿಕ ತರಗತಿಗಳನ್ನು ನಡೆಸುವಂತೆ ಆಗ್ರಹಿಸಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು.

ಸೆ.19 ರಿಂದ ಪ್ರಥಮ ವರ್ಷದ ತರಗತಿಗಳು ಆರಂಭವಾಗಲಿದೆ ಎಂದು ಮೊದಲು ತಿಳಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ತರಗತಿ ಆರಂಭವಾಗದೇ ಇದ್ದಾಗ, ಅಧ್ಯಾಪಕರು ಮೌಲ್ಯಮಾಪನಕ್ಕೆ ತೆರಳಿರುವುದರಿಂದ ತಡವಾಗುತ್ತಿದೆ ಎಂದು ಸಬೂಬು ಹೇಳಲಾಯಿತು. ಆದರೆ ಆ ಬಳಿಕ ಎರಡು ತಿಂಗಳಾದರೂ ಇನ್ನೂ ತರಗತಿ ಆರಂಭವಾಗಿಲ್ಲ. ಅ.5 ರಿಂದ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ತರಗತಿಗಳು ಆರಂಭವಾಗಿವೆ. ಆದರೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ದೀಪಾವಳಿ, ದಸರಾ ಹಬ್ಬದ ನೆಪವೊಡ್ಡಲಾಗಿದೆ. ಈಗ ಅತಿಥಿ ಉಪನ್ಯಾಸಕರಿಲ್ಲ ಎಂಬ ಕಾರಣ ನೀಡಲಾಗುತ್ತಿದೆ ಎಂದು ಮುಷ್ಕರ ನಿರತ ವಿದ್ಯಾರ್ಥಿಗಳು ದೂರಿದರು.

ಕಾಲೇಜಿಗೆ ಸುತ್ತಮತ್ತಲ ಹಳ್ಳಿಗಳಿಂದ, ಹಾಸ್ಟೆಲ್‌ಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಬಸ್‌ಗಳಿಗೆ ನೂರಾರು ರು. ಖರ್ಚು ಮಾಡಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಬಂದ ಬಳಿಕ ಕಾಲೇಜು ಇಲ್ಲ ಎಂದರೆ ಹಣವೂ ನಷ್ಟ, ಪಾಠ- ಪಠ್ಯಗಳೂ ಇಲ್ಲದೇ ಸಮಯ-ಶ್ರಮ ನಷ್ಟವಾಗುತ್ತದೆ ಎಂದು ಕಿಡಿಕಾರಿದರು.

ಕಾಲೇಜಿನಲ್ಲಿ ಸುಮಾರು 150ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ವಾರಕ್ಕೆ 2400 ಗಂಟೆ ತರಗತಿಗಳು ನಡೆಯಬೇಕಿದೆ. ಆದರೆ ನಡೆಯುತ್ತಿಲ್ಲ. ಹೀಗಾದರೆ ನಮ್ಮ ವಿದ್ಯಾಭ್ಯಾಸದ ಕತೆ ಏನು ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಅನಂತರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಿದ್ಯಾರ್ಥಿಗಳ ಮುಷ್ಕರಕ್ಕೆ ವಕೀಲ ಕೆ.ಪಿ. ಶ್ರೀಪಾಲ್, ಹಳೆಯ ವಿದ್ಯಾರ್ಥಿ ಅ.ನ. ವಿಜಯೇಂದ್ರ, ಡಿಎಸ್ಎಸ್ ಮುಖಂಡ ಎಂ.ಗುರುಮೂರ್ತಿ ಮುಂತಾದವರು ಬೆಂಬಲ ನೀಡಿದರು.

- - - -ಫೋಟೋ:

ಸರಿಯಾದ ವೇಳೆ ಪಾಠ ಪ್ರವಚನಗಳು ಆರಂಭವಾಗಿಲ್ಲದೆ ಇರುವುದನ್ನು ಖಂಡಿಸಿ ಸಹ್ಯಾದ್ರಿ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳು ಕಾಲೇಜು ಎದುರು ಪ್ರತಿಭಟನೆ ನಡೆಸಿದರು.