2006ರ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. ಈಗಾಗಲೇ ಸುಮಾರು 4000 ಅನುದಾನಿತ ನೌಕರರು ಯಾವುದೇ ಪಿಂಚಣಿ ಇಲ್ಲದೆ ನಿವೃತ್ತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅನುದಾನಿತ ನೌಕರರ ಹಿಂದಿನ ಸೇವೆ ಪರಿಗಣಿಸಿ ಯಾವುದೇ ಹಿಂಬಾಕಿ ಇಲ್ಲದೆ ಅವರನ್ನೂ ಸಹ ಹಳೆಯ ಪಿಂಚಣಿಗೆ ಪರಿಗಣಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿ ಸೇರಿದಂತೆ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಡಿ.17ರಂದು ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದಿಂದ ಬೃಹತ್ ಹೋರಾಟ ನಡೆಯಲಿದೆ ಎಂದು ಸಂಘದ ರಾಜ್ಯಉಪಾಧ್ಯಕ್ಷ ಶಿವಣ್ಣ ಮಂಗಲ ಎಚ್ಚರಿಕೆ ನೀಡಿದ್ದಾರೆ.

2006ರ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಯಾವುದೇ ಪಿಂಚಣಿ ವ್ಯವಸ್ಥೆ ಇಲ್ಲ. ಈಗಾಗಲೇ ಸುಮಾರು 4000 ಅನುದಾನಿತ ನೌಕರರು ಯಾವುದೇ ಪಿಂಚಣಿ ಇಲ್ಲದೆ ನಿವೃತ್ತರಾಗಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಅನುದಾನಿತ ನೌಕರರ ಹಿಂದಿನ ಸೇವೆ ಪರಿಗಣಿಸಿ ಯಾವುದೇ ಹಿಂಬಾಕಿ ಇಲ್ಲದೆ ಅವರನ್ನೂ ಸಹ ಹಳೆಯ ಪಿಂಚಣಿಗೆ ಪರಿಗಣಿಸಬೇಕು ಎಂದು 2022ರಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನುದಾನಿತ ನೌಕರರು ಸುಮಾರು 141 ದಿನಗಳ ಕಾಲ ಸತತ ಹೋರಾಟ ಮಾಡಿದ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರದ ಜನಪ್ರತಿನಿಧಿಗಳು ತಮ್ಮ ಸರ್ಕಾರ ಬಂದಾಗ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅನುದಾನಿತ ನೌಕರರಿಗೂ ಜಾರಿ ಮಾಡುವುದಾಗಿ ಭರವಸೆ ನೀಡಿ, ಪ್ರಣಾಳಿಕೆಯಲ್ಲಿ ಹಾಕಲಾಗಿತ್ತು. ಆದರೆ ಸರ್ಕಾರ ಬಂದು ಸುಮಾರು ಎರಡೂವರೆ ವರ್ಷಗಳು ಮುಗಿದಿದ್ದರೂ ಇದುವರೆಗೂ ಇದರ ಬಗ್ಗೆ ಗಮನಹರಿಸದಿರುವುದರಿಂದ ಸರ್ಕಾರದ ಗಮನ ಸೆಳೆಯಲು ಅನಿವಾರ್ಯವಾಗಿ ಈ ಹೋರಾಟ ಮಾಡಬೇಕಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ಜ್ಯೋತಿಸಂಜೀವಿನಿ ಆರೋಗ್ಯ ವಿಮೆ, ಖಾಲಿ ಇರುವ ಹುದ್ದೆಗಳ ಶೀಘ್ರ ಭರ್ತಿ, ಅಲ್ಲಿಯತನಕ ಅತಿಥಿ ಶಿಕ್ಷಕ ಹಾಗೂ ಉಪನ್ಯಾಸಕರ ನೇಮಕಾತಿ, ಇನ್ನಿತರ ಹತ್ತಾರು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ಡಿಸೆಂಬರ್ 17ರಂದು ಬೃಹತ್ ಹೋರಾಟ ರೂಪಿಸಲಾಗಿದೆ ಎಂದರು.

ಅನುದಾನಿತ ನೌಕರರ ಮತ್ತು ಸಂಸ್ಥೆಗಳ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದ್ದು ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಸಂಘದ ಪದಾಧಿಕಾರಿಗಳು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಶಿವಲಿಂಗೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್ ಬಾಬು ವಿನಂತಿಸಿದ್ದಾರೆ.