ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಡಿ. 10ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ತಿಳಿಸಿದರು.

ಹಾವೇರಿ: ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದಂತೆ ಮಾಸಿಕ ₹10 ಸಾವಿರ ನೀಡುವ ಕುರಿತು ಲಿಖಿತ ಆದೇಶ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಡಿ. 10ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಬೃಹತ್ ಹೋರಾಟಕ್ಕೆ ನಿರ್ಧರಿಸಲಾಗಿದೆ. ಜಿಲ್ಲೆಯ ಆಶಾ ಕಾರ್ಯಕರ್ತೆಯರು ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಕರೆ ನೀಡಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ರಸ್ತೆಯ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯ ವತಿಯಿಂದ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಆಶಾ ಕಾರ್ಯಕರ್ತೆಯರು 2008-2009ನೇ ಸಾಲಿನಿಂದ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮಾಡುವ ವಿವಿಧ ಚಟುವಟಿಕೆಗಳನ್ನು ಆನ್‌ಲೈನ್ ಪೋರ್ಟಲ್ ಒಂದಕ್ಕೆ ಅಪ್ಲೋಡ್ ಮಾಡಿದ ನಂತರ ಪಿಎಚ್‌ಸಿಯಿಂದ ಆರಂಭವಾಗಿ ತಾಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದವರೆಗೂ ವಿವಿಧ ಹಂತಗಳಲ್ಲಿ ದೃಢೀಕರಣಗೊಂಡು ಅವರಿಗೆ ಹಣ ತಲುಪಬೇಕು. ಕೆಲಸ ಮಾಡಿದಷ್ಟು ಹಣ ಬರುತ್ತಿಲ್ಲ ಎಂದು ಹಲವಾರು ವರ್ಷಗಳಿಂದ ದೂರಿದರೂ ಇಲಾಖೆ ಅದನ್ನು ಸರಿಪಡಿಸಲಿಲ್ಲ. ಆದ್ದರಿಂದ, ಕೇಂದ್ರ ಸರ್ಕಾರ ನೀಡುವ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರ ನೀಡುವ ಮಾಸಿಕ ನಿಶ್ಚಿತ ಗೌರವ ಧನ ₹5,000 ಎರಡೂ ಹಣವನ್ನು ಒಟ್ಟಿಗೆ ಸೇರಿಸಿದರೆ ಅಂದಾಜು ಮಾಸಿಕ ₹15,000ರಷ್ಟು ಆಗುತ್ತಿದ್ದು, ಅದನ್ನು ನಿಶ್ಚಿತ ರೂಪದಲ್ಲಿ ನೀಡಬೇಕು ಎಂದು ಹೋರಾಟ ಮಾಡುತ್ತ ಬರಲಾಗುತ್ತಿದೆ ಎಂದರು.ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದಂತೆ ಮಾಸಿಕ ₹10 ಸಾವಿರದ ಲಿಖಿತ ಆದೇಶ ಹೊರಡಿಸಬೇಕು. ಎಂದು ಕಳೆದ 11 ತಿಂಗಳಿಂದ ಆರೋಗ್ಯ ಇಲಾಖೆ, ಮುಖ್ಯಮಂತ್ರಿಗಳ ಕಚೇರಿ ಅಲೆದಾಡಿದರೂ ಇಲ್ಲಿಯವರೆಗೂ ಸರ್ಕಾರದ ಆದೇಶ ಆಗಲಿಲ್ಲ. ಈ ಕುರಿತು ಕೂಡಲೇ ಆದೇಶ ಮಾಡಬೇಕು. ಕೇಂದ್ರ ಸರ್ಕಾರ ಹೆಚ್ಚಿಸಿರುವ ₹1,500 ಪ್ರೋತ್ಸಾಹ ಧನವನ್ನು ಕೂಡಲೇ ನೀಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಹಾಗೂ ರಾಜ್ಯ ಸರ್ಕಾರದ ಗೌರವ ಧನ ಸೇರಿ ಮಾಸಿಕ ₹15 ಸಾವಿರ ಗೌರವ ಧನ ನೀಡಬೇಕು. ರಾಜ್ಯ ಸರ್ಕಾರ ಮಾತು ಕೊಟ್ಟಂತೆ, ಏಪ್ರಿಲ್‌ ನಿಂದ ಅನ್ವಯಿಸಿ ಮಾಸಿಕ 10 ಸಾವಿರ ಗ್ಯಾರಂಟಿಯನ್ನು ಮತ್ತು ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಳ ಮಾಡಿರುವಂತೆ ಎಲ್ಲ ಆಶಾ ಕಾರ್ಯಕರ್ತೆಯರಿಗೂ ಭರವಸೆ ಕೊಟ್ಟಂತೆ ₹1,000 ಇದೇ ವರ್ಷದ ಏಪ್ರಿಲ್ ನಿಂದಲೇ ಅನ್ವಯಿಸಿ ಕೂಡಲೇ ಆದೇಶ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪುರಮಠ ಮಾತನಾಡಿ, ಆಶಾ ಕಾರ್ಯಕರ್ತೆಯರ ಬೆಳಗಾವಿ ಚಲೋ ಹೋರಾಟ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಹೋರಾಟವಾಗಿದೆ. ನಮ್ಮ ಜಿಲ್ಲೆಯ ಎಲ್ಲ ಪಿಎಚ್‌ಸಿಗಳ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಮಂಜುಳಾ ಮಾಸೂರ, ರೇಖಾ ಕರಿಗಾರ, ಗೀತಾ ಮಡಿವಾಳರ, ನೀಲಾ ಕಳ್ಳಿಮನಿ, ಸುಧಾ ಹಲಗೇರಿ, ರೂಪಾ, ರತ್ನಾ ಮಕರವಳ್ಳಿ, ಲಕ್ಷ್ಮೀ ಕಬ್ಬೂರ, ಪುಷ್ಪ ಮಾಡ್ಲೂರಮಠ ಸೇರಿದಂತೆ ಆಶಾ ಕಾರ್ಯಕರ್ತೆರು ಇದ್ದರು.