ಸಾರಾಂಶ
ಹಾವೇರಿ: ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕೇವಲ ಅಲ್ಪಸಂಖ್ಯಾತರ ಹಾಗೂ ಸಮಾಜಘಾತುಕ ವ್ಯಕ್ತಿಗಳ ಓಲೈಕೆ ಮಾಡುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಸರಣಿ ಕೊಲೆಗಳು ನಡೆದರೂ ಕಾಂಗ್ರೆಸ್ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಅಪರಾಧ ಕೃತ್ಯ ಎಸಗುವವರಿಗೆ ಕಾನೂನಿನ ಭಯ ಇಲ್ಲದಂತಾಗಿದೆ ಎಂದು ಆರೋಪಿಸಿದರು.ಬರ ಪರಿಹಾರದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ. ಅಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೂ ಸಹಿತ ರಾಜ್ಯ ಸರ್ಕಾರ ಗಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ರೀತಿ ಮುಂದುವರೆದರೆ ಕರ್ನಾಟಕ ರಾಜ್ಯ ದೇಶ್ಯಾದಂತ ಗೂಂಡಾ ರಾಜ್ಯವೆಂದು ಕುಖ್ಯಾತಿ ಪಡೆಯತ್ತದೆ ಎಂದರು. ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೊಲೆ, ಸುಲಿಗೆ ಮಾಡುವವರಿಗೆ, ದರೋಡೆಕೊರರಿಗೆ ಭ್ರಷ್ಟಾಚಾರಿಗಳಿಗೆ ಉದ್ಯಾನವವಾಗಿ ನಿರ್ಮಾಣವಾಗಿದೆ. ಮಹಿಳೆಯರ ಮೇಲೆ ಸಾಲು ಸಾಲು ಅತ್ಯಾಚಾರ ನಡೆದರು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಅಂಜಲಿ ಅಂಬಿಗೇರ ಹತ್ಯೆ ನಡೆದಿರುವುದು ಈ ನೆಲದ ಕಾನೂನು ಸುವ್ಯವಸ್ಥೆ ಹಾಳಾಗಿರುವುದಕ್ಕೆ ಸಾಕ್ಷಿ. ಪೊಲೀಸ್ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡದೇ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಸಮಾಜದಲ್ಲಿ ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ವಿಫಲವಾಗಿದೆ. ಇದೇ ರೀತಿ ಅವ್ಯವಸ್ಥೆ ಮುಂದುವರೆದರೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸಂಪುರ್ಣವಾಗಿ ನೆಲಕಚ್ಚಿ ರಾಜ್ಯದಲ್ಲಿ ಅರಾಜಕೀಯತೆ ಉಂಟಾಗುತ್ತದೆ ಎಂದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಮಾತನಾಡಿ, ಕರ್ನಾಟಕ ರಾಜ್ಯ ಅತ್ಯಾಚಾರಿಗಳ ಹಾಗೂ ದರೋಡೆಕೊರರ ತವರು ಮನೆಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಾಚಾರಿಗಳನ್ನು ಹಾಗೂ ದರೋಡೆಕೊರರನ್ನು ಮನೆಯ ಮಕ್ಕಳಂತೆ ಪೋಷಿಸುತ್ತಿದೆ. ಇಂದು ರಾಜ್ಯದಲ್ಲಿ ನಡೆಯುತ್ತಿರುವ ಕೊಲೆ ಹಾಗೂ ಕಾನೂನು ಅವ್ಯವಸ್ಥೆ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಳೆದ ನಾಲ್ಕು ತಿಂಗಳಲ್ಲಿ ೪೩೦ ಕೊಲೆ ನಡೆದಿವೆ. ಅಲ್ಲದೆ ೧೯೮ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಮನೆಯಿಂದ ಹೊರಬಂದ ಮಹಿಳೆ ಸುರಕ್ಷಿತವಾಗಿ ಮನೆ ಸೇರುತ್ತಾರೆ ಎಂಬ ನಂಬಿಕೆ ಇಲ್ಲ. ಅಂಜಲಿ ಅಂಬಿಗೇರ ಹತ್ಯೆ ನಡೆದಾಗಲು ಪೊಲೀಸ್ ಇಲಾಖೆ ಆರೋಪಿಯನ್ನು ತಕ್ಷಣವೇ ಬಂಧಿಸಲು ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಗಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರಿದರು. ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಇಂದು ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಪ್ರತಿನಿತ್ಯ ಮಾಧ್ಯಮದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರದ ಪ್ರಕರಣಗಳೇ ವರದಿಯಾಗುತ್ತಿವೆ. ಮಹಿಳೆಯರ ರಕ್ಷಣೆ ಮಾಡುವುದರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇದ್ದರೆ ಅಧಿಕಾರದಿಂದ ಕೆಳಗೆ ಇಳಿಯಬೇಕು ಇಲ್ಲದಿದ್ದರೆ ಮುಂದೆ ರಾಜ್ಯದ ಮಹಿಳೆಯರು ಸರ್ಕಾರದ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಹೊಸಮನಿ, ಬಸವರಾಜ ಹಾದಿಮನಿ, ಕಿರಣ ಕೋಣನವರ, ಪ್ರಭು ಹಿಟ್ನಳ್ಳಿ, ನಿರಂಜನ ಹೇರೂರ, ರುದ್ರೇಶ ಚಿನಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಶಿವಯೋಗಿ ಶಿರೂರ, ರಾಜಶೇಖರ ಬಳ್ಳಾರಿ, ಬಿ.ಎನ್. ಮತ್ತೂರ, ರವೀಂದ್ರ ಅಂಗಡಿ, ವಿಜಯಕುಮಾರ ಚಿನ್ನಿಕಟ್ಟಿ, ರತ್ನ ಭೀಮಕ್ಕನವರ, ಶ್ರೀದೇವಿ ರೆಡ್ಡಿ, ಸುಜಾತ ಆರಾಧ್ಯಮಠ, ಸರೋಜ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಅಕ್ಕಮಾದೇವಿ ಹರ್ತಿ, ರೇಣುಕಾ ಪಾಟೀಲ, ಇಂದ್ರಾ ಮಲ್ಲನಗೌಡ್ರ, ಭಾಗ್ಯಶ್ರೀ ಮೋರೆ, ಚದ್ರಕಲಾ ಕೊಟಗಿ, ಅನೀತಾ ಹಬೀಬ, ಸುಮಂಗಲ ಚನ್ನವೀರಗೌಡ್ರ, ಪುರ್ಣಿಮಾ ನಿಡಗುಂದಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.