ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಅಧಿಕಾರವಿಲ್ಲದೆ ಚಡಪಡಿಸುತ್ತಿರುವ ಬಿಜೆಪಿ ನಾಯಕರು ಮುಡಾ ಹಗರಣ ನಡೆದಿದೆ ಎಂದು ಆರೋಪಿಸಿ ಸದನದಲ್ಲಿ ಪ್ರತಿಭಟನೆ ಮಾಡುವ ಮೂಲಕ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಗುರುವಾರ ಟೀಕಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನಸೆಳೆದು ಪರಿಹಾರ ಕಂಡುಕೊಳ್ಳಬೇಕಾದ ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಎಂದರು.
ಮೇಲ್ಮನೆಯಲ್ಲಿ ಬಿಜೆಪಿಯ ಸಭಾಪತಿಗಳಿದ್ದಾರೆ. ಅವರೇ ಮುಡಾ ಹಗರಣ ಕುರಿತ ಚರ್ಚೆಗೆ ನಿರಾಕರಿಸಿದ್ದಾರೆ. ಆದರೂ ಸಹ ಬಿಜೆಪಿ ನಾಯಕರು ಉದ್ದೇಶ ಪೂರ್ವಕವಾಗಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ವಸ್ತು ಸ್ಥಿತಿ ಅರಿತು ಮಾತನಾಡುತ್ತಿಲ್ಲ. ವಿನಾಕಾರಣ ಸದನದ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಹಗರಣದ ಬಗ್ಗೆ ಈಗಾಗಲೇ ಮೂರು ತನಿಖಾ ಸಂಸ್ಥೆಗಳಿಂದ ತನಿಖೆ ನಡೆಯುತ್ತಿದೆ. ಸತ್ಯ ಹೊರಬಿದ್ದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮುಡಾ ಹೋರಾಟಕ್ಕೆ ಕಾಂಗ್ರೆಸ್‌ನಿಂದಲೇ ಒತ್ತಡವಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದರು. ವಿಜಯೇಂದ್ರ ಬಾಯಿಚಪಲಕ್ಕೆ ಈ ರೀತಿ ಬಾಲಿಷ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದರು.
ಹಗರಣ ಕುರಿತಂತೆ ಬೆಂಗಳೂರಿಂದ ಮೈಸೂರುವರೆಗೆ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಉದ್ದೇಶ ಕುರಿತಂತೆ ಪ್ರತಿಕ್ರಿಯಿಸಿ, ಈ ಹಿಂದೆ ಮುಡಾ ಹಗರಣ ಬಗ್ಗೆ ಪ್ರತಿಭಟನೆ ನಡೆಸಲು ಮೈಸೂರಿಗೆ ಹೊರಟಿದ್ದ ಬಿಜೆಪಿ ನಾಯಕರನ್ನು ಬಂಧಿಸಲಾಗಿತ್ತು. ಈಗ ಅದೇ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ವ್ಯಂಗ್ಯವಾಡಿದರು.ಜು.30 ರಂದು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭಮಂಡ್ಯ: ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡದ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜುಲೈ 30 ರಂದು ಬೆಳಗ್ಗೆ 10.30 ಗಂಟೆಗೆ ಕಾಲೇಜು ಆವರಣದ ಕುವೆಂಪು ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸುವರು. ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಪ್ರಧಾನ ಭಾಷಣಮಾಡಲಿದ್ದಾರೆ. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚೆಲುವಯ್ಯ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಎಚ್.ಪಿ.ತಮ್ಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.