ತೈಲಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

| Published : Jun 19 2024, 01:04 AM IST

ತೈಲಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ದಿಢೀರ್ ತೈಲ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಎತ್ತಿನಬಂಡಿ, ಕತ್ತೆಗಳ ಮೆರವಣಿಗೆ, ದ್ವಿಚಕ್ರ ವಾಹನಗಳ ಶವಯಾತ್ರೆ ಮೂಲಕ ವಿನೂತನವಾಗಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ದಿಢೀರ್ ತೈಲ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಜೋಡಿಸಲಾಗದ ಸ್ಥಿತಿಯಲ್ಲಿರುವ ರಾಜ್ಯ ಸರ್ಕಾರ, ಬೆಲೆ ಏರಿಕೆಗಳ ಮೂಲಕ ಹಣ ಜೋಡಿಸಿಕೊಳ್ಳಲು ಮುಂದಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಖಾಲಿ ಮಾಡಿಕೊಂಡು ಜನರ ಜೇಬುಗಳತ್ತ ನೋಡುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ಸಿಗರು, ಫಲಿತಾಂಶ ಬಳಿಕ ಹತಾಶರಾಗಿ ತೈಲಬೆಲೆಯ ಮೂಲಕ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ನಡುವೆ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆ ಏರಿಕೆ ಮಾಡಲಾಗಿದೆ. ಬರಗಾಲದ ಸಂಕಷ್ಟದ ನಡುವೆ ಬೆಲೆ ಏರಿಕೆ ಬಿಸಿ ಜನರನ್ನು ಕಂಗಾಲಾಗುವಂತೆ ಮಾಡಿದ್ದು, ಇದೊಂದು ಅವಿವೇಕದ ನಿರ್ಧಾರವಾಗಿದೆ. ಕೂಡಲೇ ರಾಜ್ಯ ಸರ್ಕಾರ ತೈಲಬೆಲೆ ಹೆಚ್ಚಳ ನಿಲುವು ಹಿಂಡೆಯಬೇಕು. ಇಲ್ಲವಾದರೆ ಹೋರಾಟ ಮುಂದುವರಿಸಲಾಗುವುದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರು ಎಚ್ಚರಿಸಿದರು.

ನಗರದಲ್ಲಿ ಎತ್ತಿನಬಂಡಿಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಪಕ್ಷದ ಮುಖಂಡರಾದ ಡಾ. ಮಹಿಪಾಲ್, ಕೆ.ಎ. ರಾಮಲಿಂಗಪ್ಪ, ಎಚ್.ಹನುಮಂತಪ್ಪ, ಗುತ್ತಿಗನೂರು ವಿರೂಪಾಕ್ಷಗೌಡ, ರೈತ ಮೋರ್ಚಾದ ಗಣಪಾಲ್ ಐನಾಥ ರೆಡ್ಡಿ, ಯುವಮೋರ್ಚಾದ ಸಿದ್ದಪ್ಪ, ಅಡವಿಸ್ವಾಮಿ, ಕೆ.ಮಲ್ಲೇಶ್ ಕುಮಾರ್, ಪಾಲಿಕೆ ಸದಸ್ಯರಾದ ಶ್ರೀನಿವಾಸಮೋತ್ಕರ್, ಹನುಮಂತಪ್ಪ, ಸುರೇಖಾ ಮಲ್ಲನಗೌಡ, ಮಹಿಳಾ ಘಟಕದ ಅಧ್ಯಕ್ಷೆ ಸುಗುಣಾ, ವಿಜಯಲಕ್ಷ್ಮೀ, ಸುಮಾರೆಡ್ಡಿ, ಪುಷ್ಪಲತಾ, ರಾಮು ದಮ್ಮೂರು ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಪೊಲೀಸರು-ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ

ಗಡಗಿಚನ್ನಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಮಾನವ ಸರಪಳಿ ನಿರ್ಮಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗುತ್ತಿದ್ದ ವೇಳೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಹಾಗೂ ಇತರೆ ಪೊಲೀಸರು ಮಧ್ಯಪ್ರವೇಶಿಸಿದರು. ಇದಕ್ಕೆ ಪ್ರತಿರೋಧಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ಬಳಿಕ ಪಕ್ಷದ ನಾಯಕರ ಮಧ್ಯಪ್ರವೇಶ ಬಳಿಕ ತಿಳಿಯಾಯಿತು.