ಮುಖ್ಯಮಂತ್ರಿಗಳು ಬೆಳೆಗಳಿಗೆ ನೀರಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯದ ಎಲ್ಲ ಜಲಾಶಯಗಳಿಂದ ಕುಡಿಯುವ ನೀರಿಗಾಗಿ ನೀರನ್ನು ಹರಿಸಲಾಗುತ್ತಿದೆ

ಮುನಿರಾಬಾದ್ : ತುಂಗಭದ್ರಾ ಜಲಾಶಯದ ಬಲದಂಡೆ ಭಾಗದ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಪ್ರಮುಖ ನಗರಗಳಿಗೆ ಮತ್ತು ನದಿ ಪಾತ್ರದ ಗ್ರಾಮಗಳಲ್ಲಿ ಕುಡಿವ ನೀರಿಗಾಗಿ ತಕ್ಷಣ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ ಇಲ್ಲಿನ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರ ಕಚೇರಿ ಮುಂದೆ ನಡೆದ ಅನಿರ್ದಿಷ್ಟ ಮುಷ್ಕರ್‌ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಅಂಬರೀಶ್ ಚಗ್ಭಾವಿ, ಸೋಮವಾರ ಮಧ್ಯಾಹ್ನದ ವೇಳೆಗೆ ತುಂಗಭದ್ರಾ ಜಲಾಶಯದ ಬಲದಂಡೆ ಭಾಗದ ನಗರ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಜಲಾಶಯದಿಂದ ನೀರು ಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತಾ ರೋಕೊ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದರು.

ಮುಖ್ಯಮಂತ್ರಿಗಳು ಬೆಳೆಗಳಿಗೆ ನೀರಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯದ ಎಲ್ಲ ಜಲಾಶಯಗಳಿಂದ ಕುಡಿಯುವ ನೀರಿಗಾಗಿ ನೀರನ್ನು ಹರಿಸಲಾಗುತ್ತಿದೆ. ಆದರೆ ತುಂಗಭದ್ರಾ ಜಲಾಶಯದ ಬಲದಂಡೆ ಭಾಗದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಗ್ರಾಮ ಮತ್ತು ನಗರಗಳ ವಿಷಯದಲ್ಲಿ ಯಾಕೆ ಸರ್ಕಾರ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಅನ್ನದಾತ ರೈತ ಸಂಘದ ರಾಜ್ಯ ಅಧ್ಯಕ್ಷ ಎಸ್.ಎ ಖಾದ್ರಿ, ರೈತರು ಕಳೆದ ಎರಡು ದಿನಗಳಿಂದ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿಯ ಮುಂದೆ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಿದರೂ ಯಾವುದೇ ಅಧಿಕಾರಿಗಳು ತಮ್ಮ ಸಮಸ್ಯೆ ಆಲಿಸಲು ಬಾರದೇ ಇರುವುದು ದುರಾದೃಷ್ಟಕರ ವಿಷಯ ಎಂದರು.

ನದಿ ಪಾತ್ರದ ಕಮಲಾಪುರ, ಕಂಪ್ಲಿ, ವೆಂಕಟಪುರ್, ನಿಟ್ಟೂರ್, ಸಾಣಪುರ್, ರಾಮಸಾಗರ, ಸಿರುಗುಪ್ಪದಲ್ಲಿ ಕುಡಿಯುವ ನೀರಿಗಾಗಿ ಜನರು ಹಾಗೂ ಜಾನುವಾರು ಒದ್ದಾಡುತ್ತಿದ್ದಾರೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಪ್ರಮುಖ ನಗರಗಳಿಗೆ ಕುಡಿವ ನೀರಿಗಾಗಿ ಅಧಿಕಾರಿಗಳು ನೀರು ಹರಿಸುತ್ತಿದ್ದಾರೆ. ಆದರೆ ಬಲದಂಡೆ ಭಾಗದಲ್ಲಿ ಯಾಕೆ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ವಿಜಯನಗರ ಜಿಲ್ಲೆ ಅನ್ನದಾತ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ವೀರೇಶ್ ಮಾತನಾಡಿ, ಸರ್ಕಾರವು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೂಲಕ ಕುಡಿವ ನೀರಿಗಾಗಿ ನೀರು ಹರಿಸುವುದಲ್ಲದೇ ಕೆರೆಗಳನ್ನು ಸಹ ತುಂಬಲಾಗುತ್ತಿದೆ, ಆದರೆ ಬಲದಂಡೆ ಭಾಗದಲ್ಲಿ ಸುಮಾರು ಹತ್ತಕ್ಕೂ ಅಧಿಕ ಕೆರೆಗಳಿದ್ದು, ಈ ಕೆರೆಗಳಿಗೆ ನೀರು ತುಂಬಿಸಿದರೆ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ ಅಲ್ಲದೇ ಜನ ಮತ್ತು ಜಾನುವಾರುಗಳಿಗೆ ನೀರು ಲಭ್ಯವಾಗಿ ಅವರು ಬದುಕುತ್ತಾರೆ. ಆದರೆ ಸರ್ಕಾರ ಬಲದಂಡೆ ಭಾಗಕ್ಕೆ ಕುಡಿವ ನೀರನ್ನು ಹರಿಸದೇ ಸಂಕಷ್ಟಕ್ಕೆ ದೂಡಿದೆ ಎಂದು ಆರೂಪಿಸಿದರು.

ಈ ಸಂದರ್ಭದಲ್ಲಿ ಅನ್ನದಾತ ರೈತ ಸಂಘದ ಗೌರವಾಧ್ಯಕ್ಷ ಪ್ರಕಾಶ್ ತಿಮ್ಲಾಪುರ್, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ರತ್ನಮ್ಮ, ವಿಜಯನಗರ ಜಿಲ್ಲಾಧ್ಯಕ್ಷೆ ಸಾವಿತ್ರಿ ಪ್ರಕಾಶ್, ಹೊಸಪೇಟೆ ತಾಲೂಕು ಜಿಲ್ಲಾಧ್ಯಕ್ಷೆ ಲಕ್ಷ್ಮಿ ಬುಕ್ಕಸಾಗರ್ ಹಾಗೂ ಬಳ್ಳಾರಿ, ವಿಜಯನಗರ ಭಾಗದ ಪ್ರಗತಿಪರ ರೈತರು ಉಪಸ್ಥಿತರಿದ್ದರು.