ಸಾರಾಂಶ
ಗದಗ: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಅಮೇರಿಕಾದಲ್ಲಿ ದಲಿತ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದಿಂದ ಜಿಲ್ಲಾಡಳಿತ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಮಂಜುನಾಥ ಶಿವಪ್ಪ ಮುಳಗುಂದ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿ, ದಲಿತ ವಿರೋಧಿ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ವಿಪ ಸದಸ್ಯ ಎಸ್.ವಿ. ಸಂಕನೂರ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜಣ್ಣ ಕುರಡಗಿ ಮಾತನಾಡಿ, ದಲಿತ ವಿರೋಧಿಯಾಗಿರುವ ರಾಹುಲ್ ಗಾಂಧಿ ಸಂಸದರಾಗಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಯುವಮುಖಂಡ ಉಮೇಶಗೌಡ ಪಾಟೀಲ ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ತಾವೂ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆ ಸೃಷ್ಠಿಸಿರುವ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರನ್ನು ಸ್ಮರಿಸಿಯೇ ಮುಂದೇ ಸಾಗಬೇಕು. ಅವರು ರಚಿಸಿರುವ ಸಂವಿಧಾನ ಅಧಾರದ ಮೇಲೆಯೇ ದೇಶದ ಆಡಳಿತ ನಡೆಯುತ್ತಿದ್ದು, ದಲಿತ ಸಮುದಾಯಕ್ಕೆ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. 19ನೇ ಶತಮಾನದಲ್ಲಿ ಅಂದಿನ ಜಾತಿ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾಗಿ ಜಾತಿ ವಿರುದ್ಧ ನಿಂತು ಸಮರ ಸಾರಿ ವಿಶ್ವದೆತ್ತರಕ್ಕೆ ಬೆಳೆದ ಭಾರತ ದೇಶವನ್ನು ಇಡಿ ವಿಶ್ವಕ್ಕೆ ಪರಿಚಯಿಸಿದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಸಮಾಧಿಗೆ ಜಾಗ ನೀಡದ ಕಾಂಗ್ರೆಸ್ ಸರ್ಕಾರಕ್ಕೆ ಅಂಬೇಡ್ಕರ ಹೆಸರು ಬಳಸುವ ಅರ್ಹತೆ ಇಲ್ಲ, ದಲಿತರನ್ನು ಗೌರವಿಸದ ಕಾಂಗ್ರೆಸ್ ನಾಯಕ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕಿದೆ ಎಂದರು.
ಈ ವೇಳೆ ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಶ್ರೀಕಾಂತ ಖಟವಟೆ, ಭೀಮಸಿಂಗ್ ರಾಠೋಡ, ಅಶೋಕ ಕುಡತಿನ್ನಿ, ಉಡಚಪ್ಪ ಹಳ್ಳಕೇರಿ, ಅನೀಲ ಅಬ್ಬಿಗೇರಿ, ಅಶೋಕ ಮುಳಗುಂದ, ಬೂದಪ್ಪ ಹುಣಶಿಮರದ, ನಿರ್ಮಲಾ ಕೊಳ್ಳಿ, ಮಲ್ಲು ಮಾದರ, ಸುರೇಶ ಚಲವಾದಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.