ಕುದೂರಿನಲ್ಲಿ ಶಿಕ್ಷಕಿ ಅಮಾನತು ಖಂಡಿಸಿ ಮಕ್ಕಳು, ಪೋಷಕರಿಂದ ಪ್ರತಿಭಟನೆ

| Published : Aug 27 2024, 01:34 AM IST

ಕುದೂರಿನಲ್ಲಿ ಶಿಕ್ಷಕಿ ಅಮಾನತು ಖಂಡಿಸಿ ಮಕ್ಕಳು, ಪೋಷಕರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು ಹೋಬಳಿ ಕಾಗಿಮಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪರಿಮಳ ಅವರನ್ನು ಅಮಾನತ್ತು ಮಾಡಿರುವುದನ್ನು ಖಂಡಿಸಿ ಶಾಲೆಯ ಮಕ್ಕಳು ಮತ್ತು ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುದೂರುಕುದೂರು ಹೋಬಳಿ ಕಾಗಿಮಡು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪರಿಮಳ ಅವರನ್ನು ಅಮಾನತ್ತು ಮಾಡಿರುವುದನ್ನು ಖಂಡಿಸಿ ಶಾಲೆಯ ಮಕ್ಕಳು ಮತ್ತು ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು.

ಕಳೆದ ಏಪ್ರಿಲ್ 2 ರಂದು ಶಾಲೆಯ ಹಿಂದಿ ಶಿಕ್ಷಕಿ ಯಶೋಧ ಮತ್ತು ವಿಜ್ಞಾನ ಶಿಕ್ಷಕಿ ಪರಿಮಳ ಜಗಳ ಮಾಡಿಕೊಂಡಿದ್ದರು. ನಂತರ ಇಬ್ಬರು ಹೆಡ್ ಮಾಸ್ಟರ್ ಬಳಿ ತಪ್ಪಾಯಿತು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಕೇಳಿ ಸುಮ್ಮನಾಗಿದ್ದರು. ಆದರೆ ಈ ವಿಚಾರವಾಗಿ ಯಶೋಧ ಎಂಬ ಶಿಕ್ಷಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಎಂದು ಪೋಷಕರಲ್ಲದವರ ಬಳಿ ಸಹಿ ಹಾಕಿಸಿ ಪರಿಮಳ ಎಂಬುವ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಬರೆದಿದ್ದರು. ಇದರ ಅಧಾರದ ಮೇಲೆ ಮೂರು ಜನರ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ಮಾಡಿ ಉಪನಿರ್ದೇಶಕರಿಗೆ ವರದಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪರಿಮಳರವರನ್ನು ಅಮಾನತು ಮಾಡಲಾಗಿದೆ. ಇಷ್ಟೆಲ್ಲ ಚಟುವಟಿಕೆಗಳು ಆದರೂ ಈ ವಿಷಯ ಶಾಲೆಯ ಎಸ್ಡಿಎಂಸಿ ಸದಸ್ಯರಿಗೆ ಗೊತ್ತಾಗದಂತೆ ಅಧಿಕಾರಿಗಳು ವರ್ತಿಸಿದ್ದಾರೆ ಎಂದು ಸದಸ್ಯರು ದೂರಿದ್ದಾರೆ.

ಮಕ್ಕಳು ಪೋಷಕರ ಪ್ರತಿಭಟನೆ

ನೆಚ್ಚಿನ ಶಿಕ್ಷಕಿಯ ಅಮಾನತು ರದ್ಧು ಮಾಡಬೇಕೆಂದು ಆಗ್ರಹಿಸಿ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು. ಶಿಕ್ಷಕಿ ಪರಿಮಳ ಮಕ್ಕಳು ಮತ್ತು ಪೋಷಕರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಪಾಠಗಳನ್ನು ಚನ್ನಾಗಿ ಮಾಡುತ್ತಿದ್ದರು. ಶಾಲೆಯ ಒಳಗೆ ಆದ ಘಟನೆ ಇಬ್ಬರು ತಪ್ಪು ಎಂದು ಒಪ್ಪಿಕೊಂಡು ಕೆಲಸ ಮಾಡುತ್ತಿದ್ದಾಗ ಅಮಾನತ್ತಿನ ಅವಶ್ಯಕತೆ ಇರಲಿಲ್ಲ. ಅಮಾನತು ಮಾಡಲೇಬೇಕೆಂಬ ಕೆಲವು ರಾಜಕೀಯ ಒತ್ತಡಗಳಿದ್ದುದರಿಂದಲೇ ಮಾಡಲಾಗಿದೆ ಎಂದು ಪೋಷಕರು ಮತ್ತು ಎಸ್ ಡಿಎಂಸಿ ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳು ಶಾಲೆಯೊಳಗೆ ಹೋಗದೆ ರಸ್ತೆಯಲ್ಲಿ ಕುಳಿತು ಪರಿಮಳರವರನ್ನು ಅಮಾನತ್ತು ಮಾಡಿರುವುದುನ್ನು ಖಂಡಿಸಿ ಪ್ರತಿಭಟನೆ ಮಾಡಿದರು. ಅವರ ಅಮಾನತು ರದ್ದು ಮಾಡಿ ಇದೇ ಶಾಲೆಗೆ ಕರ್ತವ್ಯ ನಿರ್ವಹಣೆ ಮಾಡುವಂತೆ ಮಾಡದೇ ಹೋದರೆ ನಮ್ಮ ಮಕ್ಕಳಿಗೆ ಟಿಸಿ ಕೊಟ್ಟುಬಿಡಿ ನಾವು ಬೇರೊಂದು ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಆಗ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ಪೋಷಕರನ್ನು ಸಮಾಧಾನ ಮಾಡಿ ಪರಿಮಳರವರ ಜಾಗಕ್ಕೆ ತಾತ್ಕಾಲಿಕವಾಗಿ ಬೇರೊಬ್ಬ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ಬಂದು ಪಾಠ ಮಾಡುವಂತೆ ನಿಯೋಜನೆ ಮಾಡಿದ್ದೇವೆ. ಇದು ನಮ್ಮ ಕೈ ಮೀರಿ ಹೋಗಿರುವಂತದ್ದು ಕಾನೂನಿಗಿಂತ ಯಾವುದು ದೊಡ್ಡದಿಲ್ಲ ಎಂದು ಸಮಧಾನ ಮಾಡಿದರೂ ಪೋಷಕರು ಮತ್ತಷ್ಟು ಆಕ್ರೋಶಗೊಂಡರು. ನಂತರ ಎಸ್ ಡಿಎಂಸಿ ಸದಸ್ಯರು ಮತ್ತು ಪೋಷಕರು ಅರ್ಜಿ ಬರೆದು ಪರಿಮಳರವರ ಅಮಾನತ್ತನ್ನು ರದ್ದುಗೊಳಿಸಿ ಮತ್ತಿದೇ ಶಾಲೆಗೆ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಮಾಡಿಕೊಡಬೇಕು ಬರೆದ ಅರ್ಜಿಯನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಡುವ ಜವಾಬ್ದಾರಿಯನ್ನು ನಾನು ಹೊರುತ್ತೇನೆ ಎಂದು ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಹೇಳಿದ ನಂತರ ಪೋಷಕರು ಒಪ್ಪಿ ಪ್ರತಿಭಟನೆ ನಿಲ್ಲಿಸಿದರು.

ಇದು ಮೇಲಾಧಿಕಾರಿಗಳು ಕೈಗೊಂಡ ನಿರ್ಣಯವಾಗಿದ್ದು ಇಲ್ಲಿನ ವಾಸ್ತವ ಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಲುಪಿಸುತ್ತೇನೆ. ಅಲ್ಲಿಯವರೆಗೂ ಮಕ್ಕಳ ಪಾಠಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. - ಸೋಮಶೇಖರ್‌ , ಬಿಇಒಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಗಂಗಾಧರ್. ದೈಹಿಕ ಶಿಕ್ಷಣ ಇಲಾಖೆಯ ಅಧೀಕ್ಷಕ ಮುನಿಯಪ್ಪ, ನಿವೃತ್ತ ಶಿಕ್ಷಕ ಗಂಗಣ್ಣ, ಸದಸ್ಯ ಮೂರ್ತಿ ಮತ್ತಿತರರು ಹಾಜರಿದ್ದರು.