ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ಕುರುಬ ಸಮಾಜದವರು ಹೆದ್ದಾರಿ ತಡೆದು, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಕೆಪಿಸಿಸಿ ಸದಸ್ಯ ಸುರೇಶ್ ಹಾಗೂ ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿಕೃತಿ ನಿರ್ಮಿಸಿ ಧಿಕ್ಕಾರ ಕೂಗಿ ಬೆಂಕಿಯೊಂದಿಗೆ ದಹಿಸಿದರು. ರಸ್ತೆ ಮಧ್ಯ ಟೈರ್ ಸುಟ್ಟು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದರು.
ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ಅನುಮತಿ ನೀಡಿರುವ ರಾಜಪಾಲರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರ ಬಿಜೆಪಿ ಪಕ್ಷದ ತಾಳಕ್ಕೆ ತಕ್ಕಂತೆ ಗೊಂಬೆಯಂತೆ ವರ್ತಿಸುತ್ತಿದೆ. ಈ ನಡೆ ನಿಲ್ಲಿಸಬೇಕು. ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯ ದೂರು ಆಧರಿಸಿ ನೋಟೀಸ್ ಜಾರಿಗೊಳಿಸಿರುವುದು ತರವಲ್ಲ ಎಂದು ಲೇವಡಿ ಮಾಡಿದರು.
ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿ, ರಾಜ್ಯಪಾಲರನ್ನು ಕೇಂದ್ರ ವಾಪಸ್ ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಇನ್‌ಸ್ಪೆಕ್ಟರ್ ರೇವತಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರಕುಮಾರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಜಯರಾಂ, ಲಕ್ಷ್ಮೀಪುರ ಚಂದ್ರು, ಗೋವಿಂದನಹಳ್ಳಿ ಶಾಮಣ್ಣ, ಸಾಸಲು ಈರಪ್ಪ, ಎಲ್.ಪಿ.ದೇವರಾಜು, ಎಂ.ಡಿ.ಕೃಷ್ಣಮೂರ್ತಿ, ಮಣೀಶ್, ಸಿದ್ಧಿಖ್, ಉಮೇಶ್, ರಮೇಶ್, ಅಶೋಕ, ಚೇತನ್, ಮಾರ್ಗೋನಹಳ್ಳಿ ಸಣ್ಣನಿಂಗೇಗೌಡ, ಚಿಕ್ಕೇಗೌಡ ಮತ್ತಿತರರು ಭಾಗವಹಿಸಿದ್ದರು.