ಸಾರಾಂಶ
ಮಹಿಳೆಯರಿಗೆ ಅಪಮಾನ ಮಾಡಿದ ಕುಮಾರಸ್ವಾಮಿ, ಆಕ್ರೋಶ । ಕ್ಷಮೆಯಾಚಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಕೊಪ್ಪಳ
ಗ್ಯಾರಂಟಿ ಯೋಜನೆಗಳು ಬಂದ ಮೇಲೆ ಮಹಿಳೆಯರು ಸ್ವಲ್ಪ ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಸೋಮವಾರ ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡಲೇ ಕ್ಷಮೆಯಾಚನೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ. ಅವರ ಮಾನದ ಕುರಿತು ಮಾತನಾಡಿದ್ದಾರೆ. ಅವರಿಗೆ ಸರ್ಕಾರ ಕೊಡುವ ಸವಲತ್ತುಗಳಿಂದ ದಾರಿತಪ್ಪುತ್ತಿದ್ದಾರೆ ಎನ್ನುವ ಮಾತು ಹೇಳಿರುವುದು ನಾಡಿನ ಮಹಿಳೆಯರಿಗೆ ಮಾಡಿರುವ ಅಪಮಾನವಾಗಿದೆ. ಮಹಿಳಾ ಸಮುದಾಯ ಇದರಿಂದ ಆಕ್ರೋಶಗೊಂಡಿದೆ. ಆದ್ದರಿಂದ ತಾವೂ ಕೂಡಲೇ ಕ್ಷಮೆ ಕೋರಬೇಕು ಮತ್ತು ಹೇಳಿಕೆಯನ್ನು ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.ಮಹಿಳೆಯರಿಗೆ ಸರ್ಕಾರದ ಸವಲತ್ತು ನೀಡಿದರೆ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತೆನೆ ಹೊತ್ತ ಮಹಿಳೆ ಚಿಹ್ನೆ ಇಟ್ಟುಕೊಂಡಿರುವುದು ಯಾವ ಕಾರಣಕ್ಕಾಗಿ ಎಂದು ಕಿಡಿಕಾರಿದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಅಧಿಕಾರಕ್ಕಾಗಿಯೇ ಹಾತೊರೆಯುತ್ತಿದ್ದಾರೆ. ಅವರಿಗೆ ರಾಜ್ಯದ ಹಿತ ಮುಖ್ಯ ಅಲ್ಲವೇ ಇಲ್ಲ. ಕೇವಲ ತಮ್ಮ ಕುಟುಂಬ ಉಳಿಸಿಕೊಳ್ಳಲು ರಾಜ್ಯದ ಹಿತ ಬಲಿ ನೀಡುತ್ತಿದ್ದಾರೆ. ಅಂಥವರಿಗೆ ರಾಜ್ಯದ ಜನರು ಈಗಾಗಲೇ ಪಾಠ ಕಲಿಸಿದ್ದಾರೆ. ಆದರೂ ಮಹಿಳೆಯರಿಗೆ ಅಪಮಾನ ಮಾಡುವ ದಿಸೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ರಾಜ್ಯ ವಕ್ತಾರೆ ಶೈಲಜಾ ಹಿರೇಮಠ, ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಗೊಂಡಬಾಳ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಷ್ಮಾ ಖಾಜಾವಲಿ, ನಗರ ಘಟಕದ ಅಧ್ಯಕ್ಷೆ ಸವಿತಾ ಗೋರಂಟ್ಲಿ, ಮಹಿಳಾ ಎಸ್ಸಿ ತಾಲೂಕು ಅಧ್ಯಕ್ಷೆ ಕಾವೇರಿ, ಸಾವಿತ್ರಿ ಮುಜುಂದಾರ, ಸುಮಂಗಲಾ ನಾಯಕ, ಸೌಭಾಗ್ಯಲಕ್ಷ್ಮಿ ಗೋರವರ, ಅಂಬಿಕಾ ನಾಗರಾಳ ಮೊದಲಾದವರು ಇದ್ದರು.
ಕಾಂಗ್ರೆಸ್ ನಾಯಕರ ಬೆಂಬಲ:ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ವಿರುದ್ಧ ಕಾಂಗ್ರೆಸ್ ಮಹಿಳಾ ಪದಾಧಿಕಾರಿಗಳು ನಡೆಸಿದ ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಬೆಂಬಲ ನೀಡಿದರು. ನೇರವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಪಕ್ಕದಲ್ಲಿಯೇ ನಿಂತು ಪ್ರತಿಭಟನೆಯನ್ನು ಬೆಂಬಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ, ಕೃಷ್ಣ ಇಟ್ಟಂಗಿ, ಕೃಷ್ಣಾರಡ್ಡಿ ಗಲಬಿ, ಗಾಳೆಪ್ಪ ಪೂಜಾರ, ಕುರಗೋಡ ರವಿಯಾದವ್ ಮೊದಲಾದವರು ಇದ್ದರು.