ಸಾಗುವಳಿ ರೈತರಿಂದ ಪ್ರತಿಭಟನೆ

| Published : Aug 29 2024, 12:56 AM IST

ಸಾರಾಂಶ

ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಗುವಳಿ ಜಮೀನು ವಶಕ್ಕೆ ಪಡೆದುಯತ್ತಿರುವುದನ್ನು ಖಂಡಿಸಿ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ರೈತ ಸಂಘಟನೆ, ಕಕಜ ವೇದಿಕೆ, ವಿವಿಧ ಸಂಘಟನೆಗಳು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಚನ್ನಪಟ್ಟಣ: ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಗುವಳಿ ಜಮೀನು ವಶಕ್ಕೆ ಪಡೆದುಯತ್ತಿರುವುದನ್ನು ಖಂಡಿಸಿ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ರೈತ ಸಂಘಟನೆ, ಕಕಜ ವೇದಿಕೆ, ವಿವಿಧ ಸಂಘಟನೆಗಳು ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಜೆಡಿಎಸ್ ಮುಖಂಡ ಪ್ರಸನ್ನ ಪಿ.ಗೌಡ ಮಾತನಾಡಿ, ಬಡವರಿಗೆ ನಿವೇಶನ ನೀಡುವ ಸಲುವಾಗಿ ರೈತರ ಸಾಗುವಳಿ ಜಮೀನು ವಶಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ನಿವೇಶನ ನೀಡಲು ರೈತರ ಭೂಮಿ ವಶಪಡಿಸಿಕೊಳ್ಳುವುದು ಸರಿಯಲ್ಲ. ಬೇಕಿದ್ದರೆ, ಖಾಸಗಿಯವರಿಂದ ಜಮೀನು ಖರೀದಿಸಿ ಬಡವರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಿರುವುದು ಸ್ವಾಗತಾರ್ಹ. ಆದರೆ ಅವರಿಗೆ ಎಲ್ಲಿ ನಿವೇಶನ ನೀಡಿದರೆ ಜನರಿಗೆ ಅನುಕೂಲ ಆಗುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದಂತೆ ಕಾಣುತ್ತಿದೆ. ಕಾಡಂಚಿನ ಸರ್ಕಾರಿ ಗೋಮಾಳದಲ್ಲಿ ಬಡವರಿಗೆ ನಿವೇಶ ನೀಡುತ್ತೇವೆ ಎಂದು ಹೊರಟಿರುವುದು ಖಂಡನೀಯ ಎಂದರು. ಗ್ರಾಮದ ಸರ್ಕಾರಿ ಗೋಮಾಳದಲ್ಲಿ ನೂರಾರು ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೂ ಅವರಿಗೆ ಜಮೀನಿಗೆ ಹಗಲಿನಲ್ಲಿ ಓಡಾಡಲು ಭಯ ಆಗುತ್ತದೆ. ಸುತ್ತಮುತ್ತಲ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಅಲ್ಲದೆ ಬೆಟ್ಟ ಗುಡ್ಡಗಳು ಇರುವ ನಿಟ್ಟಿನಲ್ಲಿ ಮಳೆ ಬಂದರೆ ಹಳ್ಳಗಳು ತುಂಬಿ ನೀರು ಜಮೀನನ್ನು ಮುಚ್ಚಿಕೊಳ್ಳುತ್ತದೆ. ಇಂತಹ ಹಳ್ಳದಲ್ಲಿ ಕಾಡು ಪ್ರಾಣಿಗಳಿರುವ ಜಾಗದಲ್ಲಿ ಬಡವರಿಗೆ ನಿವೇಶನ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಭೂಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಜ್ಜನಹಳ್ಳಿ ಪ್ರಭು ಮಾತನಾಡಿ, ಸರ್ಕಾರಿ ಗೋಮಾಳದಲ್ಲಿ ರೈತರು ಯಾವುದೇ ಬೆಳೆ ಬೆಳೆಯದೆ ಪಾಳು ಭೂಮಿಯಾಗಿದ್ದರೆ ಆ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ಬಳಕೆ ಮಾಡಿಕೊಳ್ಳಬಹುದು. ಆದರೆ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ೧೩ಕ್ಕೂ ಹೆಚ್ಚು ರೈತರು ನೀಲಗಿರಿ, ಮಾವು, ಟೊಮೇಟೋ, ತೆಂಗು ಬೆಳೆಯುತ್ತಾ ಬಂದಿದ್ದಾರೆ. ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಹಾಕಿದ್ದಾರೆ. ಆದರೆ ಇದನ್ನೆಲ್ಲಾ ಮರೆಮಾಚಿ ಇದು ಪಾಳುಭೂಮಿ ಎಂದು ಸುಳ್ಳು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳ ಹೆಸರಿಗೆ ದಾಖಲಿ ಮಾಡಿರುವ ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳ ನಡೆ ಖಂಡನೀಯವಾಗಿದೆ. ಸರ್ಕಾರಿ ಗೋಮಾಳವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.

ಕಕಜವೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಡೇರಿ ಅಧ್ಯಕ್ಷ ಚೌಡೇಗೌಡ, ರೈತ ರಘುಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಪುಟ್ಟಚಂದ್ರು, ದಿನೇಶ್‌ರಾವ್, ಬಾಬುರಾವ್, ರಾಮರಾವ್, ರಾಮಚಂದ್ರರಾವ್, ಪಾರ್ವತಮ್ಮ ರಾಜಶೇಖರ್, ಸುಂದ್ರಮ್ಮ ಚನ್ನೇಗೌಡ, ಉಜ್ಜನಹಳ್ಳಿ ಸುರೇಶ್, ಯು.ಬಿ.ಕೃಷ್ಣೇಗೌಡ, ಸಂಪತ್, ಭೂಹಳ್ಳಿ ತಮ್ಮಣ್ಣ, ಪಿ.ಹಳ್ಳಿ ದೊಡ್ಡಿ ಶಿವರಾಜು ಮತ್ತಿತರರಿದ್ದರು.