ಮಂಡ್ಯ ತಾಲೂಕು ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ

| Published : Jan 23 2024, 01:46 AM IST

ಮಂಡ್ಯ ತಾಲೂಕು ಕಚೇರಿ ಎದುರು ರೈತ ಸಂಘದಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಮಸ್ಯೆಗಳನ್ನು ಈಡೇರಿಸುವುದಿಲ್ಲ, ಸೈನಿಕರಿಗೆ ಭೂಮಿಯನ್ನು ನೀಡುವುದಿಲ್ಲ. ಎಲ್ಲೋ ಹೊರಗಡೆ ಕುಳಿತಿರುವ ಪ್ರಭಾವಿಗಳಿಗೆ ಬೆಟ್ಟದ ಭಾಗಗಳಲ್ಲಿ ಸೇರಿದಂತೆ ಮೇಲುಕೋಟೆ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಜಮೀನು ನೀಡುತ್ತೀರಾ ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಡ್ಯ ಉಪವಿಭಾಗಾಧಿಕಾರಿಗೆ ರೈತ ಸಂಘದ ಮುಖಂಡರು ತರಾಟೆ.

ಕನ್ನಡಪ್ರಭ ವಾರ್ತೆ ಮಂಡ್ಯಭೂ ಸ್ವಾಧೀನವಾಗಿರುವ ಜಮೀನನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಬಳಿ ಸೇರಿದ ಸಂಘದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಶಿವಮೂರ್ತಿ ಮತ್ತು ತಹಸೀಲ್ದಾರ್ ಶಿವಕುಮಾರ ಬಿರಾದರ್‌ ಅವರಿಗೆ ಮನವಿ ನೀಡಲಾಯಿತು.

ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಹುಳ್ಳೇನಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನವಾಗಿರುವ ಸರ್ವೆ ನಂ.191ರ ಎರಡು ಎಕರೆ ಭೂಮಿಯ ಆರ್‌ಟಿಸಿಯಲ್ಲಿ ಭೂ ಮಾಲೀಕರ ಹೆಸರನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಹೊನಗಾನಹಳ್ಳಿ ಗ್ರಾಮದ ಸ.ನಂ.63ರಲ್ಲಿ 2.17 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮ ಒತ್ತುವರಿಯಿಂದ ತೆರವುಗೊಳಿಸುವುದು. ರೈತರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ, ಕಂದಾಯ ಇಲಾಖೆ ದಾಖಲಾತಿಗಳನ್ನು ಸಂರಕ್ಷಣೆ ಮಾಡದೆ ಕಡತ ಲಭ್ಯವಿಲ್ಲವೆಂಬ ಹಿಂಬರಹ ನೀಡುತ್ತಿರವುದು ಖಂಡನೀಯ. ಸಾರ್ವಜನಿಕ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸದೆ ರಸ್ತೆ ಸಂಪರ್ಕ ನೀಡದೆ ಸುಳ್ಳು ವರದಿ ನೀಡಲಾಗಿದೆ. ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಆಹಾರ ಶಾಖೆ, ಪಿಂಚಣಿ ಶಾಖೆ ಭ್ರಷ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದ ಮೇಲಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಸಿಗೆ ತರಾಟೆ:

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ ಮಾತನಾಡಿ, ರೈತರ ಸಮಸ್ಯೆಗಳನ್ನು ಈಡೇರಿಸುವುದಿಲ್ಲ, ಸೈನಿಕರಿಗೆ ಭೂಮಿಯನ್ನು ನೀಡುವುದಿಲ್ಲ. ಎಲ್ಲೋ ಹೊರಗಡೆ ಕುಳಿತಿರುವ ಪ್ರಭಾವಿಗಳಿಗೆ ಬೆಟ್ಟದ ಭಾಗಗಳಲ್ಲಿ ಸೇರಿದಂತೆ ಮೇಲುಕೋಟೆ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಜಮೀನು ನೀಡುತ್ತೀರಾ ಎಂದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಂಡ್ಯ ಉಪವಿಭಾಗಾಧಿಕಾರಿಗೆ ತರಾಟೆ ತೆಗೆದುಕೊಂಡರು.

ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಅರಕೆರೆ ಪ್ರಸನ್ನ, ಶಂಕರ್‌ ಶಿವಳ್ಳಿ, ಎಂ.ಎಸ್‌.ಅಣ್ಣಯ್ಯ, ಕೆ.ಆರ್.ರವೀಂದ್ರ, ಬಿ.ಟಿ.ವಿಶ್ವನಾಥ್‌, ಎಚ್‌.ಡಿ.ಜಯರಾಂ, ಜಿ.ಎ.ಶಂಕರ್, ಗಾಣದಾಳು ಜಯರಾಂ ಭಾಗವಹಿಸಿದ್ದರು.