ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

| Published : Nov 08 2025, 02:15 AM IST

ಸಾರಾಂಶ

ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು, ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರು ಶುಕ್ರವಾರ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾರಲಿ ನಡೆಸಿದರು.

ಹಾವೇರಿ: ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವುದು, ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ರೈತರು ಶುಕ್ರವಾರ ನಗರದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.ನಗರದ ಕಾಗಿನೆಲೆ ರಸ್ತೆಯಲ್ಲಿರುವ ಶ್ರೀ ಮುರುಘರಾಜೇಂದ್ರ ಮಠದ ಬಳಿ ಜಮಾವಣೆಗೊಂಡಿದ್ದ ರೈತರು ಟ್ರ್ಯಾ ಕ್ಟರ್, ಕಾಳು ಬೇರ್ಪಡಿಸುವ ಯಂತ್ರಗಳ ಮೂಲಕ ರ‍್ಯಾಲಿ ನಡೆಸಿದರು. ಮುರುಘಾಮಠದಿಂದ ಆರಂಭವಾದ ರ‍್ಯಾಲಿಯು ಹೊಸಮನಿ ಸಿದ್ದಪ್ಪ ವೃತ್ತ, ಪಿ.ಬಿ ರಸ್ತೆ, ಇಜಾರಿಲಕಮಾಪುರ ಮಾರ್ಗವಾಗಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿದರು. ರ‍್ಯಾಲಿಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಸೇರಿದಂತೆ ಇತರೆ ಬೆಳೆಗಳ ಕಾಳು ಮಾಡುವ ಯಂತ್ರಗಳಿಂದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಾಳು ಬೇರ್ಪಡಿಸುವ ಯಂತ್ರದಲ್ಲಿ ಕೆಲವು ರೈತರು ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ ಕಾಲು ಕಳೆದುಕೊಂಡಿದ್ದಾರೆ. ಅಂತಹವರ ಪರಿಸ್ಥಿತಿ ಶೋಚನೀಯವಾಗಿದೆ. ಹಾಗಾಗಿ ಕಾಳು ಮಾಡುವ ಯಂತ್ರಗಳ ಟ್ರೇಲಿ, ಚೆಸ್ಸಿಗಳಿಗೆ ಆರ್‌ಟಿಒ ಅಧಿಕಾರಿಗಳು ಚೆಸ್ಸಿ ನಂಬರ್ ಕೊಡಬೇಕು. ಆರ್‌ಟಿಓ ಕಚೇರಿಗಳಲ್ಲಿ ರೈತರ ಕೃಷಿ ಸಂಬಂಧಿತ ವಾಹನಗಳಾದ ಟ್ರ್ಯಾಕ್ಟರ್, ಬೈಕ್, ಟಾಟಾಏಸ್, ಮಶೀನ್‌ನಂತಹ ಯಂತ್ರಗಳಿಗೆ ಸರ್ಕಾರದ ನಿಗದಿತ ಶುಲ್ಕ ಪಡೆದು ಲೈಸೆನ್ಸ್ ಕೊಡಬೇಕು. ರೈತರಿಗೆ ಮಾರಕವಾದ ಕೃಷಿ ಕಾಯಿದೆ ಹಿಂಪಡೆಯುವಂತೆ ಒತ್ತಾಯಿಸಿದರು. ಜತೆಗೆ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನ, ಅತೀವೃಷ್ಠಿ ಬೆಳೆಹಾನಿ ಪರಿಹಾರ, ರೈತ ಸಾಲಮನ್ನಾ, ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಹೀಗೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆ ಸರಕಾರದ ಮಟ್ಟದಲ್ಲಿ ಚರ್ಚೆ ಆಗುವಂತಹದ್ದು, ಸರ್ಕಾರದ ಗಮನಕ್ಕೆ ತರಲಾಗುವುದು. ಅತೀವೃಷ್ಠಿಯಿಂದ ಜಿಲ್ಲೆಯಲ್ಲಿ 18,871 ಹೆಕ್ಟೇರ್ ಹಾನಿ ಸಂಭವಿಸಿದ್ದರ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ 40,544 ರೈತರಿಗೆ 16.68 ಕೋಟಿ ರು. ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಖಾತೆಗೆ ಜಮೆಯಾಗಲಿದೆ. ಮಾವು ಹಾಗೂ ಅಡಿಕೆ ವಿಮೆಗೆ ಪರಿಹಾರ ಬಂದಿದ್ದು, ಜಮೆಯಾಗುತ್ತಿದೆ ಎಂದು ವಿವರಿಸಿದರು. ಈ ವೇಳೆ ರಾಜ್ಯ ಮುಖಂಡರಾದ ಭಕ್ತರಹಳ್ಳಿ ಭೈರೇಗೌಡ್ರ, ಕಲ್ಮೇಶ ಲಿಂಗಾಡಿ, ರಾಘವೇಂದ್ರ ನಾಯಕ, ಬಸವರಾಜ ಟಿ.ಡಿ ಮಾತನಾಡಿದರು. ರೈತ ಮುಖಂಡರಾದ ರುದ್ರಪ್ಪ ಬಳಿಗಾರ, ರಮೇಶ ದೊಡ್ಡೂರ, ಬಸಯ್ಯ ಹಿರೇಮಠ, ಮಂಜಣ್ಣ ಕಂಕಣವಾಡ, ಚನ್ನಬಸಪ್ಪ ಹಾವಣಗಿ, ಆನಂದ ಕೆಳಗಿನಮನಿ, ಶಿವನಗೌಡ ಗಾಜೀಗೌಡ್ರ, ಶ್ರೀನಿವಾಸ ಚಿಕ್ಕನಗೌಡ್ರ, ಗಿರಿಧರಗೌಡ ಪಾಟೀಲ, ಅನಿಲ ಡೊಳ್ಳಿನ, ಚಂದ್ರು ಬಂಕಾಪುರ, ನಾಗರಾಜ ರಿತ್ತಿಕುರುಬರ, ಮಾರ್ತಾಂಡಪ್ಪ ನೆಗಳೂರ, ರಾಮಣ್ಣ ಲಮಾಣಿ, ದೇವರಾಜ ದೊಡ್ಡಮನಿ, ನಾಗರಾಜ ನೆಲ್ಲೂರ, ಶೋಭಾ ಬೆಳಗಾವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ: ಸರ್ಕಾರ ರೈತರ ಜೊತೆಗೆ ಹುಡುಗಾಟಿಕೆ ಮಾಡದೇ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರೆ ಏನೂ ಪ್ರಯೋಜನವಾಗಲ್ಲ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೇಂದ್ರ ಬಳಿ ಹೋಗಿ ಜಗಳ ಮಾಡಿ ಮಂಜೂರು ಮಾಡಿಸಿಕೊಂಡು ಬರಬೇಕು. ಕಾರ್ಖಾನೆಗಳು ಆರಂಭವಾಗಿದ್ದು, ಕಬ್ಬಿಗೆ ದರ ನಿಗದಿ ಘೋಷಣೆ ಆಗಬೇಕು. 2013ರಲ್ಲಿ ರೈತರಿಗೆ ನೀಡಿದಂತೆ ಈ ಬಾರಿಯೂ 3200 ರು. ಜೊತೆಗೆ 350 ರು. ಸೇರಿಸಿ 3550 ರು. ಕೊಡಬೇಕು. ರೈತ ಸಂಘದ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕು ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.