ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಬೆಸ್ಕಾಂನವರು ಗ್ರಾಮೀಣ ಭಾಗದಲ್ಲಿ ತೋಟಗಳ ಮನೆಗಳಲ್ಲಿ ವಾಸಿಸುತ್ತಿರುವ ರೈತರಿಗೆ ಸಂಜೆ ನಂತರ ಇಡೀ ರಾತ್ರಿ ವಿದ್ಯುತ್ ನೀಡುತ್ತಿಲ್ಲ. ಸಂಜೆ ಕರೆಂಟ್ ಹೋದರೆ ಬೆಳಗ್ಗೆಯಾದರೂ ಬರುವುದಿಲ್ಲ ಇದರಿಂದ ರಾತ್ರಿ ವೇಳೆ ಕಾರ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದ್ದು ಕೂಡಲೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಮಾದೀಹಳ್ಳಿ, ಮಡೇನೂರು, ಬಳ್ಳೆಕೆರೆ, ರಂಗಾಪುರ ಸೇರಿದಂತೆ ವಿವಿಧ ಗ್ರಾಮಗಳ ರೈತರು ನಗರದ ಬೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಎಇಇ ಮನೋಹರ್‌ರವರಿಗೆ ಮನವಿ ಸಲ್ಲಿಸಿದರು. ಗುರುವಾರ ನಗರದ ಬಿ.ಎಚ್. ರಸ್ತೆಯಲ್ಲಿರುವ ಬೆಸ್ಕಾಂ ಮುಖ್ಯ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ ರೈತರು ದಿನಕ್ಕೆ ೭ ಗಂಟೆ ಮೂರು ಫೇಸ್ ವಿದ್ಯುತ್ ಹಾಗೂ ಉಳಿದ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡುತ್ತೇವೆ ಎಂದು ತಿಳಿಸಿದ್ದ ಬೆಸ್ಕಾಂ ಇಲಾಖೆ ಸರಿಯಾಗಿ ಎರಡು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ. ನಮಗೆ ಇಂದಿನಿಂದಲೇ ಸಂಜೆ ಹಾಗೂ ರಾತ್ರಿ ವಿದ್ಯುತ್ ನೀಡಬೇಕು. ಇತ್ತೀಚೆಗೆ ಗ್ರಾಮಗಳಲ್ಲಿ ಚಿರತೆಗಳ ಕಾಟ ಕೂಡ ಹೆಚ್ಚಾಗಿದ್ದು ವಿದ್ಯುತ್ ಇಲ್ಲದೇ ಸಂಜೆ ನಂತರ ಮನೆಯಿಂದ ಹೊರಬರುವುದಕ್ಕೆ ಭಯವಾಗುತ್ತಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು ಕರೆಂಟ್ ಇಲ್ಲದೇ ವಿದ್ಯಾರ್ಥಿಗಳಿಗೆ ಓದಲಾಗದೇ ಬಹಳ ತೊಂದರೆಯಾಗುತ್ತಿದೆ. ಕೂಡಲೇ ನಿರಂತರ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಸಂಜೆ ೬ರಿಂದ ಬೆಳಿಗ್ಗೆ ೬ ಗಂಟೆಯಾದರೂ ಕರೆಂಟ್ ಇರುವುದಿಲ್ಲ, ಇದರಿಂದಾಗಿ ಜನ ಜಾನುವಾರುಗಳ ಕುಡಿಯುವ ನೀರಿಗೆ ಬಹಳಷ್ಟು ತೊಂದರೆಯಾಗಿದೆ. ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದರೆ ವಿವಿಧ ಸಂಘಟನೆಗಳ ಜೊತೆ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.ರೈತರ ಮನವಿ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಎಇಇ ಮನೋಹರ್, ರೈತರಿಗೆ ಸಂಜೆ ವೇಳೆ ಮನೆಗಳಲ್ಲಿ ದೈನಂದಿನ ಕೆಲಸಗಳಿಗೆ, ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗಲೆಂದು ಸಿಂಗಲ್ ಫೇಸ್ ವಿದ್ಯುತ್ ನೀಡುತ್ತಿದ್ದೇವೆ. ಪ್ರತಿಯೊಂದು ಫೀಡರ್‌ಗೂ ಹತ್ತು ಆಂಪ್‌ವರೆಗೂ ವಿದ್ಯುತ್ ನೀಡಲು ರಿಲೇಗಳು ಸೆಟ್ ಆಗಿರುತ್ತದೆ. ಹತ್ತು ಆಂಪ್‌ಗೆ ಒಂದೊಂದು ಫೀಡರ್‌ಗೂ ಸುಮಾರು ನೂರೈವತ್ತು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಬಹುದು. ಮಳೆಗಾಲದಲ್ಲಿ ಕೇವಲ ನಾಲ್ಕು ಆಂಪ್‌ಗಳಲ್ಲಿ ವಿದ್ಯುತ್ ಫೀಡ್ ಆಗುತ್ತಿರುತ್ತದೆ. ರೈತರು ಸಿಂಗಲ್ ಫೇಸ್ ಆಟೋಸ್ಟಾರ್ಟರ್ ಪಂಪ್‌ಸೆಟ್‌ಗಳನ್ನು ಅಳವಡಿಸುವುದರಿಂದ ಓವರ್‌ಲೋಡ್‌ನಿಂದಾಗಿ ಟ್ರಿಪ್ ಆಗಿ ಮನೆಗಳ ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ. ಸಂಜೆ ನಾವು ಮನೆಗಳಿಗೆಂದು ವಿದ್ಯುತ್ ನೀಡಿದಾಗ ಸಿಂಗಲ್‌ಫೇಸ್ ಪಂಪ್‌ಸೆಟ್ ಚಾಲೂ ಮಾಡಬಾರದು ಎಂದು ರೈತರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು. ಗ್ರಾಮಸ್ಥರಾದ ಹರೀಶ್, ಓಂಕಾರಯ್ಯ, ಮಂಜುನಾಥ್, ಸಚೀಂದ್ರ, ರಾಜಣ್ಣ, ಕುಮಾರಣ್ಣ, ನಂಜಪ್ಪ, ಲಿಂಗರಾಜು, ತಿಮ್ಮೇಗೌಡ, ಉಮೇಶಣ್ಣ ಸೇರಿದಂತೆ ಕೊಪ್ಪ, ಚಿಕ್ಕರಂಗಾಪುರ, ಹೊಸಹಳ್ಳಿ ಗ್ರಾಮಸ್ಥರುಗಳು ಭಾಗವಹಿಸಿದ್ದರು.