ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ರೈತರಿಂದ ಪ್ರತಿಭಟನೆ

| Published : May 22 2024, 12:48 AM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊಸಪೇಟೆಯಲ್ಲಿ ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಹೊಸಪೇಟೆ ತಹಸೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

hospete news, farmers, raitha sangha, hasiru sene, sg mallikarjun, ಹೊಸಪೇಟೆ, ರೈತ ಸಂಘ, ಹಸಿರು ಸೇನೆ, ರೈತರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಹೊಸಪೇಟೆ ತಹಸೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಚೌಕದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾರ್ಯಕರ್ತರು, ಕೂಡಲೇ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲಕ್ಕೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಾರಿ ಮಳೆಗಾಲ ಆರಂಭವಾಗಿದ್ದು, ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು. ಈಗ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಗಿದಿದ್ದು, ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ವಿಶ್ರಾಂತಿ ಮೊರೆ ಹೋಗದೆ ಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈಗಾಗಲೇ ರಾಜ್ಯದ ಮಳೆ ಆರಂಭಗೊಂಡಿದೆ. ಕೆಲಕಡೆ ಭಾರೀ ಗಾಳಿ ಮಳೆಗೆ ಬತ್ತ, ಬಾಳೆ, ಕಬ್ಬು ಇತರೆ ಬೆಳೆಗಳಿಗೆ ಹಾನಿಯಾಗಿವೆ. ಈ ಬೆಳೆಗಳಿಗೂ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ಕಸಬಾ ಹೋಬಳಿ, ಕಮಲಾಪುರ ಹೋಬಳಿ ಭಾಗದಲ್ಲಿ ೫೦೦ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, ಬತ್ತದ ಬೆಳೆಗಳು ಹಾಳಾಗಿದೆ. ಸ್ವತಃ ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇವಲ ವೀಕ್ಷಣೆಗೆ ಸೀಮಿತವಾಗದೇ ರೈತರಿಗೆ ಬೆಳೆ ಹಾನಿ ಪರಿಹಾರ ದೊರೆಯಬೇಕು. ಬಾಳೆ ಬೆಳೆಯುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಒಂದು ಹೆಕ್ಟೇರ್‌ಗೆ ೮೦ ಸಾವಿರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷದ ಬರಗಾಲ ಪರಿಹಾರದಲ್ಲಿ ಮುಂಗಾರು ಬೆಳೆಗೆ ಮಾತ್ರ ಪರಿಹಾರ ಘೋಷಣೆ ಮಾಡಲಾಗಿದೆ. ಆದರೆ, ಹಿಂಗಾರು ಬೆಳೆಗೂ ಪರಿಹಾರ ನೀಡಬೇಕು. ಈ ವಿಷಯದಲ್ಲಿ ತಾರತಮ್ಯ ಸಲ್ಲದು. ರೈತರ ಬ್ಯಾಂಕ್ ಖಾತೆ, ಆಧಾರ ಜೋಡಣೆ ಸೇರಿದಂತೆ ಇತರೆ ತಾಂತ್ರಿಕ ಸಮಸ್ಯೆ ಪರಿಹರಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ರಾಗಿ, ಜೋಳವನ್ನು ಖರೀದಿ ಕೇಂದ್ರಗಳ ಮೂಲಕ ಸರ್ಕಾರ ಖರೀದಿಸಿದೆ. ಆದರೆ, ಇದುವರೆಗೂ ರೈತರಿಗೆ ಹಣ ಪಾವತಿ ಮಾಡಿಲ್ಲ. ಈ ಕೂಡಲೇ ಈ ಹಣ ಜಮೆ ಮಾಡಬೇಕು. ಮುಂಗಾರಿನಲ್ಲಿ ಬೆಳೆದಿರುವ ರಾಗಿ, ಜೋಳ, ಸಜ್ಜೆ, ತೊಗರಿ ಬೆಳೆಗಳಿಗೂ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕ ಎಚ್.ಆರ್. ಗವಿಯಪ್ಪ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕೂಡಲೇ ಕ್ರಮ ವಹಿಸಬೇಕು. ಈ ಕುರಿತು ಕಾರ್ಖಾನೆ ಸ್ಥಾಪನೆಗೆ ನಿವೇಶನ ಅಂತಿಮಗೊಳಿಸಿ ಜು. ೧೫ ರೊಳಗೆ ಕಾರ್ಖಾನೆ ಆರಂಭಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಸ್.ಜಿ. ಮಲ್ಲಿಕಾರ್ಜುನ, ಎಲ್.ಎಸ್. ರುದ್ರಪ್ಪ, ಹೇಮರಡ್ಡಿ, ಕೊಟ್ರೇಶಪ್ಪ, ಹನುಮಂತಪ್ಪ, ಜೆ. ನಾಗರಾಜ, ಸಿ.ಎ. ಚನ್ನಪ್ಪ, ಎಂ.ಮಂಜುನಾಥ ಇತರರು ಇದ್ದರು.