ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ರೈತರಿಂದ ಪ್ರತಿಭಟನೆ

| Published : Aug 20 2024, 12:49 AM IST

ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ರೈತರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನಲ್ಲಿ ಮಂಜೂರಾದ ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು ಎಂದು ರೈತ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹನುಮಸಾಗರ

ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನಲ್ಲಿ ಮಂಜೂರಾದ ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಬೇಕು ಎಂದು ರೈತ ಸಂಘಟನೆಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲಾಧ್ಯಕ್ಷ ನಜೀರಸಾಬ ಮೂಲಿಮನಿ ಮಾತನಾಡಿ, ನಮ್ಮ ಕುಷ್ಟಗಿ ತಾಲೂಕು ಬರಗಾಲ ಪ್ರದೇಶವಾಗಿದೆ. ಇದು ಮಳೆಯಾಶ್ರಿತ ಬೇಸಾಯವನ್ನೇ ಅವಲಂಬಿಸಿದೆ. ಕಳೆದ ೨೦೧೯-೨೦ನೇ ಸಾಲಿನಲ್ಲಿ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿದ ಸರ್ಕಾರ ₹498 ಕೋಟಿ ಅನುದಾನ ಮಂಜೂರಾಗಿದೆ. ಇದನ್ನು 2023ರ ಮಾರ್ಚ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಕೆರೆಗಳಿಗೆ ನೀರನ್ನು ಪೂರೈಸಿ ಮುಕ್ತಾಯಗೊಳಿಸಬೇಕು ಎಂಬ ಷರತ್ತು ಬದ್ಧ ಟೆಂಡರ್ ಪಡೆದವರಿಗೆ ಸೂಚಿಸಿತ್ತು. ಆದರೆ, ನಿಗದಿತ ಅವಧಿಯೊಳಗೆ ಕೈಗೆತ್ತಿಕೊಳ್ಳದೇ ಕೋವಿಡ್ ನೆಪದೊಡ್ಡಿ ಮತ್ತೊಂದು ವರ್ಷ ಕಾಲಾವಧಿ ಕೇಳಿ ಸರ್ಕಾರಕ್ಕೆ ವಿನಂತಿ ಮಾಡಿಕೊಂಡಿದೆ. ಮತ್ತೊಂದು ವರ್ಷ ಟೆಂಡರ್ ಬಂದಿದೆ. ಕಾಮಗಾರಿಗಳು ಮಾತ್ರ ನಡೆಯುತ್ತಿಲ್ಲ. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಆಲಮಟ್ಟಿ ಜಲಾಶಯದಿಂದ ಲಕ್ಷಾಂತರ ಕ್ಯುಸೆಕ್‌ ನೀರು ಹರಿದು ಹೋಗುತ್ತಿದೆ. ಬರದ ನಾಡಿನ ಕೆರೆಗಳನ್ನು ತುಂಬಿಸುವ ಯೋಜನೆ ರೈತರಿಗೆ ಕನಸಾಗಿ ಉಳಿದಿದೆ ಎಂದರು.

ಇದಕ್ಕೂ ಮೊದಲು ಗ್ರಾಮದೇವತೆ ದ್ಯಾಮಾಂಬಿಕಾ ದೇವಿಯ ದೇಗುಲದಲ್ಲಿ ನೂರಾರು ರೈತರು ಸಭೆ ಸೇರಿದರು. ನಂತರ ಹೊಸ ಹಾಗೂ ಹಳೇ ಬಸ್ ನಿಲ್ದಾಣ, ಗೂಳಿ ಬಸವೇಶ್ವರ ವೃತ್ತದ ಮೂಲಕ ಪ್ರತಿಭಟನೆಯ ಮೆರವಣಿಗೆ ನಾಡತಹಸೀಲ್ದಾರ ಕಚೇರಿ ತಲುಪಿತು.

ನಾಡತಹಸೀಲ್ದಾರ ಆಂಜನೇಯ ಮಸರಕಲ್ಲ ಮನವಿ ಸ್ವೀಕರಿಸಿದರು.

ರೈತ ಮುಖಂಡರಾದ ಶರಣಪ್ಪ ಬಾಚಲಾಪುರ, ಯಮನೂರ ಮಡಿವಾಳರ, ಮುತ್ತಣ್ಣ ಹಲಕೂಲಿ, ಉಮೇಶ ಬಾಚಲಾಪುರ, ಮಹಾಂತಮ್ಮ ಪೊಲೀಸ್‌ಪಾಟೀಲ್, ಬಸವರಾಜ ಗಾಣಿಗೇರ, ಬಸವರಾಜ ಮೋಟಗಿ, ಇಸ್ಮಾಯಿಲ್‌ಸಾಬ ತಹಸೀಲ್ದಾರ, ಹಸನಸಾಬ ಕಸಬ, ಪರಸಪ್ಪ ಕೊಂಡಿಕೇರ, ಕಾಡಪ್ಪ ಗದ್ದಿ, ಯಮನಪ್ಪ ಇತ್ತಪ್ಪ, ಶರಣಪ್ಪ, ಶಿವಪ್ಪ ಇತ್ತಪ್ಪ ಇತರರಿದ್ದರು.