ಅರಸೀಕೆರೆಯಲ್ಲಿ ಬಸ್‌ ನಿಲ್ದಾಣದ ರಸ್ತೆ ಕಳಪೆ: ರೈತಸಂಘದಿಂದ ಪ್ರತಿಭಟನೆ

| Published : Jul 18 2024, 01:40 AM IST

ಅರಸೀಕೆರೆಯಲ್ಲಿ ಬಸ್‌ ನಿಲ್ದಾಣದ ರಸ್ತೆ ಕಳಪೆ: ರೈತಸಂಘದಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಸೀಕೆರೆ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿ ವಾಹನಗಳು ಓಡಾಡಲು ಆಗದೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು.

ಸಾರಿಗೆ ಇಲಾಖೆ, ಇತರ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ । ಚಾಲಕರು, ಪ್ರಯಾಣಿಕರ ಪರದಾಟ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗದ ರಸ್ತೆ ಸಂಪೂರ್ಣ ಹಾಳಾಗಿ ವಾಹನಗಳು ಓಡಾಡಲು ಆಗದೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ತಕ್ಷಣವೇ ಸರಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ (ರೈತರ ಬಣ) ವತಿಯಿಂದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗಾರರನ್ನು ಉದ್ದೇಶಿಸಿ ರಾಜ್ಯ ರೈತ ಸಂಘದ ಹಾಸನ ಜಿಲ್ಲಾಧ್ಯಕ್ಷ ದಯಾನಂದ್ ಮಾತನಾಡಿ, ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆ ಮಧ್ಯೆ ಚರಂಡಿಗೆ ಹಾಕಿರುವಂತಹ ಸ್ಲ್ಯಾಬ್ ಗಳು ಮುರಿದು ಹೋಗಿ ವಾಹನಗಳು ಚಲಿಸುವಾಗ ಚಕ್ರಗಳು ಸಿಲುಕಿ ಚಾಲಕರು ಪರದಾಡುತ್ತಿದ್ದಾರೆ. ರಸ್ತೆಗೆ ಹೊಂದಿಕೊಂಡಿರುವ ಚರಂಡಿ ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನೂರಾರು ಬಸ್‌ಗಳು ಒಳಹೋಗಲು ಮತ್ತು ಹೊರ ಹೋಗಲು ಪ್ರಮುಖ ಮಾರ್ಗವಾಗಿದೆ. ರಸ್ತೆಯಲ್ಲಿ ಗುಂಡಿ ಇರುವುದರಿಂದ ರಸ್ತೆ ಉದ್ದಕ್ಕೂ ವಾಹನಗಳು ಉಜ್ಜಿಕೊಂಡು ಹೋಗಿ ಅಪಘಾತಗಳು ಸಂಭವಿಸುತ್ತವೆ. ಬಸ್ ನಿಲ್ದಾಣದ ಮುಂಭಾಗದಲ್ಲಿ ಟ್ಯಾಕ್ಸಿ ಚಾಲಕರ ನಿಲ್ದಾಣವಿದೆ. ಟ್ಯಾಕ್ಸಿ ಚಾಲಕರು ಸಹ ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಹಲವು ವರ್ಷಗಳಿಂದ ಇರುವ ಈ ರಸ್ತೆಯ ಸಮಸ್ಯೆ ಬಗ್ಗೆ ತೊಂದರೆ ಅನುಭವಿಸಿದ್ದರೂ ಸಹ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಈ ರಸ್ತೆಯ ವಿಚಾರವಾಗಿ ಗಮನಹರಿಸಿದೆ ಇರುವುದರಿಂದ ಸಾರ್ವಜನಿಕರು, ರೈತ ಸಂಘ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘ ಆಕ್ರೋಶ ವ್ಯಕ್ತಪಡಿಸಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ರಸ್ತೆ ಆದಷ್ಟು ಬೇಗ ಸರಿಪಡಿಸುವಂತೆ ಕಾಲಾವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಸರಿಪಡಿಸಿದಿದ್ದರೆ ರಸ್ತೆ ಮಧ್ಯೆ ಕುಳಿತುಕೊಂಡು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಆದಷ್ಟು ಬೇಗ ಈ ರಸ್ತೆಯನ್ನು ಸರಿಪಡಿಸಿ ಚಾಲಕರು ಪ್ರಯಾಣಿಕರ ಜೀವ ಹಿತ ರಕ್ಷಣೆ ಕಾಯಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ ರೈತ ಸಂಘದ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗವೇಣಿ, ಕಾರ್ಯದರ್ಶಿ ಕೊಟ್ರೇಶ್, ಚಂದ್ರಶೇಖರ್, ಭಾಗ್ಯಮ್ಮ, ನಿಂಗರಾಜು, ಸಿದ್ದೇಶ್, ರಂಗಸ್ವಾಮಿ, ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘ ಸದಸ್ಯರು ಇದ್ದರು.