28 ರಂದು ರೈತ ಸಂಘದಿಂದ ಪ್ರತಿಭಟನೆ

| Published : May 25 2024, 12:51 AM IST

ಸಾರಾಂಶ

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಬಿಜೆಪಿಯ ಕೆಲವು ಪುಂಡರು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದ್ದು, ಇವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಹಾಗೂ ರೈತರ ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಮೇ 28ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಬಿಜೆಪಿಯ ಕೆಲವು ಪುಂಡರು ರೈತ ಮುಖಂಡರ ಮೇಲೆ ಹಲ್ಲೆ ಮಾಡಿದ್ದು, ಇವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಹಾಗೂ ರೈತರ ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಮೇ 28ರ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಚಾ.ನಗರದಲ್ಲಿ ಬಿಜೆಪಿಯ ಕೆಲವು ಪುಂಡರು ರೈತ ಮುಖಂಡರಾದ ಮಹೇಶ್‌ಪ್ರಭು ಮೇಲೆ ಹಲ್ಲೆ ಮಾಡಿದ್ದು ಇವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕೈಗೊಳ್ಳಬೇಕು. ಇವರು ರೈತ ಮುಖಂಡರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಕೈ ಬಿಡಬೇಕು ಎಂದು ಒತ್ತಾಯಿಸುವುದರ ಜೊತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಲಾಗುವುದು ಎಂದರು.ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಈ ಪ್ರತಿಭಟನೆಯಲ್ಲಿ ಹೋರಾಟಗಾರ ಎಸ್.ಆರ್. ಹಿರೇಮಠ, ದಸಂಸರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು, ದರ್ಶನ್ ಪುಟ್ಟಣ್ಣಯ್ಯ, ಭಾರತ್‌ ಕಿಸಾನ್‌ನ ಟ.ಪಿ.ಲೋಕೇಶ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ರವಿಕಿರಣ್ ಪೊಣಚ್ಚ, ಎ.ಎಂ.ಮಹೇಶ್ ಪ್ರಭು, ಕೆ.ಮಲ್ಲಯ್ಯ, ನೇತ್ರಾವತಿ, ಮಹೇಶ್‌ ಕುಮಾರ್, ಉಗ್ರ ನರಸಿಂಹೇಗೌಡ, ಸಿಪಿಐನ ಪುಟ್ಟಮಾದು, ಸಿಐಟಿಯುನ ಸುನಂದ, ಅಭಿರುಚಿಗಣೇಶ್, ನೂರ್ ಶ್ರೀಧರ್ ಇತರ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ರೈತರ ಕೃಷಿ ಪಂಪ್‌ಸೆಟ್‌ಗಳ ಅನಧಿಕೃತ ವಿದ್ಯುತ್ ಸಂಪರ್ಕವನ್ನು ಅಧಿಕೃತಗೊಳಿಸಲು ಹಾಗೂ ಹೊಸ ಸಂಪರ್ಕವನ್ನು ಪಡೆಯಲು ರೈತರೇ ಪೂರ್ಣ ವೆಚ್ಚವನ್ನು ಭರಿಸಬೇಕೆಂದು ಹೊರಡಿಸಿರುವ ಆದೇಶವನ್ನು ಕೂಡಲೇ ಕೈಬಿಟ್ಟು ಸಾಂಕೇತಿಕ ಮೊತ್ತವನ್ನು ಪಡೆದು ಸಂಪರ್ಕವನ್ನು ಕಲ್ಪಿಸಬೇಕು ಎಂದರು. ರಾಜ್ಯದಲ್ಲಿ ತಲೆದೂರಿರುವ ಬರಗಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯ ಪೂರ್ಣ ಮೊತ್ತವನ್ನುಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ರೈತರಿಗೆ ಪೂರ್ಣ ನಷ್ಟ ಪರಿಹಾರವನ್ನು ತುಂಬಿಕೊಡಬೇಕು ಎಂದರು.

ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರು ವಿವಿಧ ಬೆಳೆ ವಿಮೆ ಪಾಲಿಸಿ ಕಟ್ಟಿದ್ದು ವಿಮಾ ಕಂಪನಿಯವರು ರೈತರ ಖಾತೆಗೆ ಪರಿಹಾರದ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದರು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವ ನೀತಿ ಜಾರಿಯಾಗುವವರೆಗೂ ಸ್ವಾಮಿನಾಥನ್ ವರದಿಯನ್ವಯ ಕನಿಷ್ಠ ಬೆಂಬಲ ಬೆಲೆಯನ್ನು ನೀಡಿ, ಎಲ್ಲಾ ಬೆಳೆಗಳನ್ನು ಸಕಾಲದಲ್ಲಿ ಖರೀದಿಸಬೇಕು. ಅಲ್ಲಿವರೆಗೆ ರೈತರಿಗೆ ವಿದ್ಯುತ್ ಮತ್ತು ಕೃಷಿ ಒಳಸುರಿಗಳು ಹಾಗೂ ಮಾನವ ಸಂಪನ್ಮೂಲ ವೆಚ್ಚವನ್ನುಉತ್ಪಾದನಾ ಸಹಾಯಧನವನ್ನಾಗಿ ಉದ್ಯೋಗ ಖಾತ್ರಿ ಯೋಜನೆಯ ಅಡಿ ಎಲ್ಲಾ ರೈತರಿಗೂ ನೀಡಬೇಕು ಎಂದರು.

ಕಳೆದ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು ಕೊಡಬೇಕಾಗಿರುವ ಉಪ ಉತ್ಪನ್ನಗಳ ಬಾಕಿ ಹಣ 150 ಟನ್‌ಗೆ ಶೀಘ್ರ ಜಮಾಗೊಳಿಸಬೇಕು. ಈ ಸಾಲಿನಲ್ಲಿ ಕಬ್ಬಿಗೆ ಟನ್‌ ಒಂದಕ್ಕೆ 5000 ರು. ಬೆಲೆ ನಿಗದಿ ಮಾಡಬೇಕು ಎಂದರು. ಮಾನವ ಮತ್ತು ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ವನ್ಯ ಜೀವಿಗಳಿಂದ ರೈತರಿಗೆ ಉಂಟಾಗುವ ಬೆಳೆ, ಆಸ್ತಿ, ಪ್ರಾಣಹಾನಿಗೆ ಹೆಚ್ಚಿನ ಪರಿಹಾರವನ್ನು ಸಕಾಲದಲ್ಲಿ ಪಾವತಿಸಬೇಕು. ವನ್ಯಜೀವಿಗಳಿಂದ ಸಾವಿಗೀಡದ ಕುಟುಂಬದ ಒಬ್ಬ ಸದಸ್ಯರಿಗೆ ಖಾಯಂ ಉದ್ಯೋಗ ದೊರಕಿಸಿಕೊಡಬೇಕು. ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು. ವನ್ಯಜೀವಿಗಳಿಂದ ಸತ್ತ ಜಾನುವಾರುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು.

ಖಾಸಗಿ ಶಾಲೆಗಳ ಪ್ರವೇಶಾತಿ ಮಾನದಂಡಗಳು ಮತ್ತು ಸರ್ಕಾರ ನಿಗದಿ ಮಾಡಿರುವ ಪ್ರವೇಶ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಿ ಸರ್ಕಾರದ ನಿಯಮವನ್ನ ಉಲ್ಲಂಘಿಸಿ ನಾಗರಿಕ ಸಮುದಾಯಕ್ಕೆ ತೊಂದರೆ ನೀಡುತ್ತಿರುವುದನ್ನು ತಪ್ಪಿಸುವಂತೆ ಒತಾಯ ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಲಾಗುವುದು.ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆ ಸಭೆ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಚಿನ್ನಸ್ವಾಮಿಗೌಂಡರ್, ಭಾಸ್ಕರ್ ಎಂ.ಶೈಲೇಂದ್ರ, ಗೌಡೇಗೌಡ, ಮಹೇಶ್‌ ಇದ್ದರು.