ಸಾರಾಂಶ
ಲಕ್ಷ್ಮೇಶ್ವರ: ಸಮೀಪದ ಕುಂದ್ರಳ್ಳಿ ಗ್ರಾಮದಲ್ಲಿನ ನಿವೇಶನಗಳ ಚಕ್‌ಬಂದಿ ಸರಿಪಡಿಸಲು ಆಗ್ರಹಿಸಿ ಬಟ್ಟೂರ ಗ್ರಾಪಂ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.
ಈ ವೇಳೆ ಪ್ರತಿಭಟನಾಕಾರರು ಗ್ರಾಪಂ ಪಿಡಿಓ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರ ಸಂತೋಷ ರಾಠೋಡ ಮಾತನಾಡಿ, ಕಳೆದ 2 ವರ್ಷಗಳ ಹಿಂದೆ ಕುಂದ್ರಳ್ಳಿ ಗ್ರಾಮವನ್ನು ಕಂದಾಯ ಗ್ರಾಮವೆಂದು ಘೋಷಣೆ ಮಾಡಿ 2022 ರಲ್ಲಿ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ 144 ಜನರಿಗೆ ನಿವೇಶನಗಳ ಹಕ್ಕು ಪತ್ರ ನೀಡಿದ್ದರು. ಆಗ ನೀಡಿದ 144 ನಿವೇಶನಗಳ ಹಕ್ಕು ಪತ್ರಗಳಲ್ಲಿ ಚಕ್ ಬಂದಿಗಳಲ್ಲಿ ವ್ಯತ್ಯಾಸವಾಗಿವೆ. ಹೀಗಾಗಿ ಚಕ್ ಬಂದಿ ಸರಿಪಡಿಸಿ ಇ-ಸ್ವತ್ತು ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಅಲೆಯುತ್ತಿದ್ದರೂ, ಇದುವರೆಗೂ ಗ್ರಾಪಂ ಅಧಿಕಾರಿಗಳು ಚಕ್ ಬಂದಿ ಸರಿಪಡಿಸಿ ಉತಾರ ನೀಡುವ ಕಾರ್ಯ ಮಾಡುತ್ತಿಲ್ಲ. ಅಧಿಕಾರಿಗಳು ನಾಳೆ ಬಾ ಎನ್ನುವ ಉತ್ತರ ನೀಡುತ್ತಿರುವುದುರಿಂದ ಪದೆ ಪದೆ ಗ್ರಾಪಂ ಕಚೇರಿಗೆ ಎಡತಾಕುವುದಾಗಿದೆ. ಹೀಗಾಗಿ ರೋಸಿ ಹೋಗಿ ಗ್ರಾಪಂ ಕಚೇರಿಯ ಬಾಗಿಲು ಬಂದ್ ಮಾಡಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಯಿತು ಎಂದು ಹೇಳಿದರು.
ಗ್ರಾಪಂ ಕಚೇರಿಯ ಬಾಗಿಲು ಬಂದ್ ಮಾಡಿರುವ ವಿಷಯ ತಿಳಿದ ತಾಪಂ ಇಓ ಕೃಷ್ಣಪ್ಪ ಧರ್ಮ ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಹಾಗೂ ಪಿಡಿಓ ಮಂಜುನಾಥ ಮಾದರ ಅವರೊಂದಿಗೆ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಿವೇಶನದ ಹಕ್ಕು ಪತ್ರಗಳ ಚಕ್‌ಬಂದಿಯಲ್ಲಿನ ವ್ಯತ್ಯಾಸ ಸರಿಪಡಿಸಲು ಆಗುತ್ತಿರುವ ತೊಂದರೆಯ ಕುರಿತು ಮಾಹಿತಿ ಪಡೆದರು.ಪಿಡಿಓ ಮಂಜುನಾಥ ಮಾದರ ಮಾತನಾಡಿ, ಹಕ್ಕುಪತ್ರಗಳಲ್ಲಿನ ಚಕ್‌ಬಂದಿಗಳಲ್ಲಿ 140 ಜನರ ನಿವೇಶನಗಳ ವ್ಯತ್ಯಾಸ ಸರಿಪಡಿಸಿದ್ದೇವೆ. ಕೆಲ ಜನರು ಗ್ರಾಮದಲ್ಲಿ ಇಲ್ಲ, ಹೀಗಾಗಿ ಹಕ್ಕು ಪತ್ರ ನೀಡುವಲ್ಲಿ ವಿಳಂಬವಾಗಿದೆ ಹೊರತು ಅನ್ಯ ಕಾರಣಗಳು ಇಲ್ಲ ಎಂದು ಹೇಳಿದರು.
ಈ ವೇಳೆ ಇಓ ಕೃಷ್ಣಪ್ಪ ಧರ್ಮರ ಮಾತನಾಡಿ, ಗ್ರಾಪಂ ಅಧಿಕಾರಿಗಳು ಹಲವು ಜನರ ಹಕ್ಕು ಪತ್ರಗಳಲ್ಲಿನ ಚಕ್ ಬಂದಿ ಸರಿ ಮಾಡಿದ್ದಾರೆ. ಇನ್ನುಳಿದ ನಿವೇಶನಗಳ ಚಕ್ ಬಂದಿಗಳನ್ನು ನಂತರ ಸರಿಪಡಿಸಿ ನೀಡುವ ಕಾರ್ಯ ಮಾಡಿರಿ. ಮುಂದಿನ ಹತ್ತು ದಿನಗಳಲ್ಲಿ ಕುಂದ್ರಳ್ಳಿ ಗ್ರಾಮದ ನಿವೇಶನಗಳ ಹಕ್ಕು ಪತ್ರ ನೀಡಿ ಅವರಿಗೆ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ನಂತರಬ ಪತ್ರಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.ಪ್ರತಿಭಟನೆಯಲ್ಲಿ ಮಾನು ಲಮಾಣಿ, ಪ್ರವೀನ ಲಮಾಣಿ, ಸಂತೋಷ ಪೆಮ್ಮಾರ, ರಮೇಶ ಲಮಾಣಿ, ಮಂಜು ಲಮಾಣಿ, ಉಮೇಶ ಲಮಾಣಿ, ಭೋಜಪ್ಪ ಕಾರಬಾರಿ, ಈಶ್ವರ ಲಮಾಣಿ, ರಮೇಶ ಪೆಮ್ಮಾರ, ಪ್ರಕಾಶ ಪೆಮ್ಮಾರ, ಸಂತೋಷ ಲಮಾಣಿ, ರವಿ ಲಮಾಣಿ, ಕುಬೇರ ಲಮಾಣಿ ಇದ್ದರು.