ಸಾರಾಂಶ
ಬೆಂಗಳೂರು : ಕಳೆದ 2 ತಿಂಗಳಿಂದ ಸರಿಯಾಗಿ ವೇತನವಾಗದ ಕಾರಣ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಗುರುವಾರ ಬೆಳಗ್ಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಆದರೆ ಮಧ್ಯಾಹ್ನದ ವೇಳೆಗೆ ಸಂಬಳ ಪಾವತಿಸಿದ ಕಾರಣ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದರು ಎಂದು ಸಂಸ್ಥೆ ತಿಳಿಸಿದೆ.
ಬೆಳಗ್ಗೆ ಆಸ್ಪತ್ರೆಯ ನರ್ಸ್, ಹೌಸ್‌ಕೀಪಿಂಗ್, ಭದ್ರತಾ ಸಿಬ್ಬಂದಿ ಸಂಬಳ ಆಗಿಲ್ಲವೆಂದು ಆಸ್ಪತ್ರೆಯೊಳಗೆ ಪ್ರತಿಭಟಿಸಿದರು. ಹೊರಗುತ್ತಿಗೆ ಏಜೆನ್ಸಿ ಸಂಬಳ ಪಾವತಿಸಿಲ್ಲ. ಆಸ್ಪತ್ರೆ ಆಡಳಿತ ಮಂಡಳಿ ಕೂಡ ಸ್ಪಂದಿಸಿಲ್ಲ ಎಂದು ದೂರಿದರು. ಪ್ರತಿಭಟನೆಯಿಂದ ಬೆಳಗ್ಗೆ ಕೆಲ ಗಂಟೆಗಳ ಕಾಲ ಸೇವೆ ವ್ಯತ್ಯಯವಾಗಿತ್ತು.
ಕೆಲಸಕ್ಕೆ ಹಾಜರಾಗುವಂತೆ ಆಡಳಿತ ಮಂಡಳಿ ಮನವೊಲಿಸಲು ಪ್ರಯತ್ನಿಸಿತು. ಆದರೆ ಸಂಬಳಕ್ಕೆ ಪಟ್ಟು ಹಿಡಿದ ಸಿಬ್ಬಂದಿ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳ ಜತೆಗೆ ವಾಗ್ವಾದ ನಡೆಸಿದರು. ಪ್ರತಿಭಟನೆ ತೀವ್ರವಾಗುವ ಅಪಾಯ ಎಚ್ಚೆತ್ತುಕೊಂಡ ಆಡಳಿತ ಮಂಡಳಿ ಮಧ್ಯಾಹ್ನದ ವೇಳೆಗೆ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಿತು.
ಸಂಸ್ಥೆಗೆ ಕಾಯಂ ನಿರ್ದೇಶಕರು ನಿಯೋಜನೆ ಆಗದಿರುವುದು ಹಾಗೂ ಕೆಲ ದಿನಗಳ ಹಿಂದೆ ಸಂಸ್ಥೆಯ ಆರ್ಥಿಕ ವಿಭಾಗದ ಅಧಿಕಾರಿ ಅಮಾನತಾಗಿರುವ ಹಿನ್ನೆಲೆಯಲ್ಲಿ ವೇತನ ಕಡತ ಬಾಕಿ ಉಳಿದಿತ್ತು. ಇದರಿಂದ ವೇತನ ವಿಳಂಬವಾಗಿತ್ತು ಎಂದು ಸಂಸ್ಥೆ ತಿಳಿಸಿದೆ.