ಸೌಲಭ್ಯಗಳಿಗೆ ಆಗ್ರಹಿಸಿ ಕೆವಿಜಿ ಬ್ಯಾಂಕ್‌ ಅಧಿಕಾರಿಗಳಿಂದ ಪ್ರತಿಭಟನೆ

| Published : Jan 24 2025, 12:47 AM IST

ಸಾರಾಂಶ

ನೌಕರರ ವೇತನ ಪರಿಷ್ಕರಣೆ ಮತ್ತು ಸೌಲಭ್ಯಗಳ ಅನುಮೋದನೆಗೊಂಡು ಒಂಭತ್ತು ತಿಂಗಳು ಗತಿಸಿದರೂ, ಜಾರಿಗೊಳಿಸಿಲ್ಲ. 12ನೇ ದ್ವಿಪಕ್ಷೀಯ ಒಪ್ಪಂದ ಜಾರಿಗೆ ಆಗ್ರಹಿಸಿದರಲ್ಲದೇ, ಕೆವಿಜಿ ಬ್ಯಾಂಕ್ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ:

ನೌಕರರ ವೇತನ ಪರಿಷ್ಕರಣೆ, ಭತ್ಯೆ ಹಾಗೂ ಮತ್ತಿತರ ಸೌಲಭ್ಯಗಳ ಜಾರಿಗೆ ಆಗ್ರಹಿಸಿ ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕ್ ಅಧಿಕಾರಿ ವರ್ಗ ನಗರದ ಕೆವಿಜಿ ಬ್ಯಾಂಕ್‌ನ ಪ್ರಧಾನ ಕಚೇರಿ ಮುಂಭಾಗ ಗುರುವಾರ ಧರಣಿ ನಡೆಸಿದರು.

ಇಲ್ಲಿನ ಜ್ಯುಬ್ಲಿ ವೃತ್ತದಲ್ಲಿ ಪ್ರಾರಂಭಗೊಂಡ ಪ್ರತಿಭಟನಾ ರ್‍ಯಾಲಿ, ಹಳೆಯ ಡಿಎಸ್ಪಿ ವೃತ್ತ, ಕೆ.ಸಿ. ಪಾರ್ಕ್, ಡಿಮಾನ್ಸ್, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಕೆವಿಜಿ ಬ್ಯಾಂಕ್‌ನ ಪ್ರಧಾನ ಕಚೇರಿ ತಲುಪಿ ಅದರ ಮುಂಭಾಗ ಎರಡು ದಿನದ ಧರಣಿ ಕೈಗೊಂಡರು. ನೌಕರರ ವೇತನ ಪರಿಷ್ಕರಣೆ ಮತ್ತು ಸೌಲಭ್ಯಗಳ ಅನುಮೋದನೆಗೊಂಡು ಒಂಭತ್ತು ತಿಂಗಳು ಗತಿಸಿದರೂ, ಜಾರಿಗೊಳಿಸಿಲ್ಲ. 12ನೇ ದ್ವಿಪಕ್ಷೀಯ ಒಪ್ಪಂದ ಜಾರಿಗೆ ಆಗ್ರಹಿಸಿದರಲ್ಲದೇ, ಕೆವಿಜಿ ಬ್ಯಾಂಕ್ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆವಿಜಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಲಿಂಗರಾಜ ರೊಡ್ಡನವರ, ಬ್ಯಾಂಕ್ ಲಾಭದಲ್ಲಿದೆ. ಉತ್ತಮ ವ್ಯವಹಾರ ಸಾಧನೆಗೈದು ನಬಾರ್ಡ್ ಹಾಗೂ ಕೇಂದ್ರ ಸರ್ಕಾರದ ಶ್ಲಾಘನೆಗೆ ಪಾತ್ರವಾಗಿದೆ. ಆದರೆ, ಬ್ಯಾಂಕ್ ಲಾಭದಲ್ಲಿದ್ದಾಗಲೂ, ನೌಕರರಿಗೆ ದೊರೆಯಬೇಕಾದ ಸೌಲಭ್ಯ ನೀಡುವಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಮಿನಾಮೇಷ ಮಾಡುವ ಮೂಲಕ ನೌಕರರನ್ನು ನಿರ್ಲಕ್ಷಿಸುತ್ತಿದೆ ಎಂದು ಖಂಡಿಸಿದರು.

ಪ್ರಧಾನ ಕಾರ್ಯದರ್ಶಿ ಸಾಗರ ಷಹಾ ಮಾತನಾಡಿ, ಬ್ಯಾಂಕಿನ ಅಧಿಕಾರಿಗಳು ನಿಬಂಧನೆಗಳು ಮೀರಿ ಹೆಚ್ಚು ಹೊಣೆಗಾರಿಗೆ ನಿಭಾಯಿಸುತ್ತಿದ್ದಾರೆ. ವೇತನ ಪರಿಷ್ಕರಣೆ, ಮಹಿಳಾ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು. 12ನೇ ವೇತನ ಪರಿಷ್ಕರಣೆ ಅಡಿ ಶೇ.15ಕ್ಕೆ ಹೆಚ್ಚಿಸಿದೆ. ಆದರೆ, ಈ ಹೆಚ್ಚುವರಿ ಸಹ ಕೆವಿಜಿಬಿ ನಿಷ್ಕ್ರೀಯಗೊಳಿಸಿದೆ. ಇದಕ್ಕೂ ಉತ್ತರ ನೀಡಿಲ್ಲ. ಮಹಿಳಾ ಅಧಿಕಾರಿಗೆ ವಿಶೇಷ ರಜೆ ಸೌಲಭ್ಯ ಹಾಗೂ ಇತರೆ ಸೌಲಭ್ಯಗಳು ನಿರ್ಲಕ್ಷ್ಯಿಸಿದೆ ಎಂದು ಆಪಾದಿಸಿದರು.