ಕನ್ನಡಪ್ರಭ ವಾರ್ತೆ ಬೈಲಹೊಂಗಲ ಮರಕುಂಬಿ ಬಳಿಯ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಎಂಟು ಜನ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮೃತ ಕಾರ್ಮಿಕರ ಕುಂಟಬಸ್ಥರು, ಗ್ರಾಮಸ್ಥರು, ರೈತಪರ ಹೋರಾಟಗಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಮರಕುಂಬಿ ಬಳಿಯ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಎಂಟು ಜನ ಕಾರ್ಮಿಕರ ಕುಟುಂಬಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮೃತ ಕಾರ್ಮಿಕರ ಕುಂಟಬಸ್ಥರು, ಗ್ರಾಮಸ್ಥರು, ರೈತಪರ ಹೋರಾಟಗಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ತಾಲೂಕಿನ ಅರವಳ್ಳಿ ಗ್ರಾಮದ ಮೃತ ಕಾರ್ಮಿಕ ಮಂಜುನಾಥ ಕಾಜಗಾರ ಶವವಿಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಮೃತ ಕುಟುಂಬಸ್ಥರು, ಗ್ರಾಮಸ್ಥರು, ರೈತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮೃತ ಬಡ ಕಾರ್ಮಿಕರ ಸಾವಿಗೆ ಕಾರ್ಖಾನೆ ಮಾಲಿಕರು, ಆಡಳಿತ ಮಂಡಳಿಯೇ ನೇರ ಹೊಣೆಗಾರರು ಎಂದು ದೂರಿದರು. ಕಾರ್ಖಾನೆಯಲ್ಲಿ ಕೆಲಸ ಮಾಡುವಾಗ ದುರಂತ ಸಂಭವಿಸಿ ಮೃತಪಟ್ಟರೂ ಕಾರ್ಖಾನೆ ಮಾಲಿಕರು, ವ್ಯವಸ್ಥಾಪಕರು, ಆಡಳಿತ ಮಂಡಳಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳದೆ, ಅಮಾನವೀಯವಾಗಿ ನಡೆದುಕೊಂಡಿದ್ದಾರೆಂದು ಆಕ್ರೋಶ ಹೊರ ಹಾಕಿದರು.ಮೃತ ಮಂಜುನಾಥ ಕಾಜಗಾರ ತಂದೆ ಮಡಿವಾಳಪ್ಪ ಕಾಜಗಾರ ಮಾತನಾಡಿ, ನನ್ನ ಮಗನ ಸಾವಿಗೆ ಕಾರ್ಖಾನೆಯವರೇ ನೇರ ಹೊಣೆ. ಮಗನಿಗೆ ಹೆಣ್ಣು ಕೊಡದ್ದರಿಂದ ಕಾರ್ಖಾನೆ ಕೆಲಸಕ್ಕೆ ಕಳಿಸಲಾಗಿತ್ತು. ಆದರೆ ಇಂದು ಶವವಾಗಿದ್ದಾನೆ. ನಮಗೆ ಯಾರು ಗತಿ ಇಲ್ಲದಂತಾಗಿದೆ. ದುಡಿಯುವ ಒಬ್ಬ ಮಗನನ್ನು ದೇವರು ಬಲಿ ಪಡೆದ. ಕಾರ್ಖಾನೆಯವರು ನನ್ನ ಮಗನನ್ನು ತಂದು ಕೊಡಲಿ ಎಂದು ಕಣ್ಣಿರು ಹಾಕಿದರು. ತಹಸೀಲ್ದಾರ್‌ ಹನುಮಂತ ಶಿರಹಟ್ಟಿ, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐಗಳಾದ ಪ್ರಮೋದ ಯಲಿಗಾರ, ಶಿವಾನಂದ ಗುಡಗನಟ್ಟಿ, ಪಿಎಸ್‌ಐ ಎಫ್‌.ವೈ.ಮಲ್ಲೂರ, ಗುರುರಾಜ ಕಲಬುರಗಿ, ಪ್ರವೀಣ ಗಂಗೊಳ್ಳ, ಸುಮಾ ನಾಯಕ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮೃತ ಕಾರ್ಮಿಕನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರೈತ ಸಂಘದ ಮುಖಂಡ ಚುನ್ನಪ್ಪ ಪೂಜಾರಿ, ಶಂಕರ ಬೋಳನ್ನವರ, ಅಪ್ಪಾಸಾಹೇಬ ಲಕ್ಕುಂಡಿ, ಮಲ್ಲಿಕಾರ್ಜುನ ಹುಂಬಿ, ರಫೀಕ ಬಡೇಘರ, ಆಸ್ಮಾ ಜೋಟದಾರ, ಕಿಶನ ನಂದಿ, ಪ್ರೇಮ ಚೌಗಲಾ, ಶಿವಾನಂದ ಮುಗಳಿಹಾಳ, ಮಲ್ಲಪ್ಪ ಏಣಗಿ, ಯಲ್ಲಪ್ಪ ಕವಲಾಪೂರ, ಈರಪ್ಪ ದಳವಾಯಿ ಸೇರಿದಂತೆ ಹಲವರು ಭಾಗವಹಿಸಿದ್ದರು.-------

ಬಾಕ್ಸ್

ಮೃತ ಕಾರ್ಮಿಕರಿಗೆ ₹ 20 ಲಕ್ಷ ಪರಿಹಾರಬಳಕ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾರ್ಖಾನೆ ವ್ಯವಸ್ಥಾಪಕ ರವೀಂದ್ರ ಪಟ್ಟಣಶೆಟ್ಟಿ ಮಾತನಾಡಿ, ಮೃತ ಕಾರ್ಮಿಕರ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ಆಘಾತವಾಗಿದೆ. ಮೃತ ಕುಟುಂಬಕ್ಕೆ ಆಡಳಿತ ಮಂಡಳಿಯಿಂದ ತಲಾ ₹ 15 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದರು. ಆದರೆ, ಪ್ರತಿಭಟನಾಕರಾರು ಒಪ್ಪದೆ ಒಂದು ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು. ಬಳಿಕ ₹ 20 ಲಕ್ಷ ಪರಿಹಾರ ಘೋಷಿಸಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ಶವವನ್ನು ತೆಗೆದುಕೊಂಡು ಅಂತ್ಯ ಸಂಸ್ಕಾರಕ್ಕಾಗಿ ಅರವಳ್ಳಿ ಗ್ರಾಮಕ್ಕೆ ತೆರಳಿದರು.