ಉಡುಪಿ: ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪರವಾನಿತ ಭೂಮಾಪಕರನ್ನು ಕಾಯಂಗೊಳಿಸಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿ 27ರಂದು ಪ್ರತಿಭಟನೆ ನಡೆಸುತಿದ್ದೇವೆ ಎಂದು ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಸನ್ ಆಗ್ರಹಿಸಿದ್ದಾರೆ.ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2000ನೇ ಇಸವಿಯಲ್ಲಿ ಕೆ.ಎಲ್.ಆರ್.ಆಕ್ಟ್ 46ರ ತಿದ್ದುಪಡಿಯಂತೆ ಪರವಾನಗಿ ಭೂಮಾಪಕರನ್ನು ಇಲಾಖೆಗೆ ಪರಿಚಯಿಸಲಾಯಿತು. ನಂತರ 2002 ರಲ್ಲಿ ಸುಮಾರು1000 ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲೇ ತರಬೇತಿ ನೀಡಿ, ಜಿಲ್ಲಾವಾರು ಕೆಲಸ ನಿರ್ವಹಿಸಲು ಪರವಾನಗಿ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಸುಮಾರು 7500 ಪರವಾನಗಿ ಭೂಮಾಪಕರ ಪೈಕಿ, ಸದ್ಯ 5000ಕ್ಕೂ ಹೆಚ್ಚು ಭೂಮಾಪಕರು ಸಕ್ರಿಯವಾಗಿ ಇಲಾಖಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೇ ಖಾಯಂ ಆಗಿಲ್ಲ ಎಂದವರು ಮಾಹಿತಿ ನೀಡಿದರು.

ಪ್ರಸ್ತುತ ಸರ್ಕಾರಿ ಭೂಮಾಪಕರು 60 ಸಾವಿರ ರು. ಖಚಿತ ವೇತನ ಪಡೆಯುತ್ತಿದ್ದಾರೆ. ಪರವಾನಿತ ಭೂ ಮಾಪಕರಿಗೆ ಪ್ರತಿ ಕಡತಕ್ಕೆ 1200 ರು. ನಿಗದಿ ಮಾಡಲಾಗಿದೆ. ಕಡತಗಳು ಅನುಮೋದನೆಗೊಳ್ಳದಿದ್ದರೆ ಈ ಹಣವೂ ಬರುವುದಿಲ್ಲ. ಆರೋಗ್ಯ ವಿಮೆ, ಸರ್ಕಾರಿ ಸೌಲಭ್ಯಗಳು ಯಾವುದೂ ದೊರೆಯುತ್ತಿಲ್ಲ. ಹೀಗಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಜಿಲ್ಲೆಯಲ್ಲಿ 25 ಸರ್ಕಾರಿ ಭೂಮಾಪಕರು ಹಾಗೂ 118 ಪರವಾನಗಿ ಭೂಮಾಪಕರಿದ್ದಾರೆ. 16,600 ಕಡತಗಳು ಬಾಕಿ ಉಳಿದಿವೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಶಶಿಕುಮಾರ್, ಮಾಧ್ಯಮ ಸಲಹೆಗಾರ ಮೋಹನ್, ಪ್ರಧಾನ ಕಾರ್ಯದರ್ಶಿ ಅಶಿತ್ ಕುಮಾರ್ ಸಂಘಟನಾ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.