ಕಡೂರುಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸದ ತಾಲೂಕಿನ ನಾಗರಾಳು ಗ್ರಾಮ ಪಂಚಾಯತಿ ಆಡಳಿತ ವೈಖರಿ ಖಂಡಿಸಿದ ಗ್ರಾಮಸ್ಥರು ಶುಕ್ರವಾರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸದೆ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ, ಕಡೂರುಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸದ ತಾಲೂಕಿನ ನಾಗರಾಳು ಗ್ರಾಮ ಪಂಚಾಯತಿ ಆಡಳಿತ ವೈಖರಿ ಖಂಡಿಸಿದ ಗ್ರಾಮಸ್ಥರು ಶುಕ್ರವಾರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡ ಎನ್.ಸಿ. ಚಂದ್ರಶೇಖರ್ ಮಾತನಾಡಿ ಗ್ರಾಮದ ಜನರ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳು ಯಾವುದೇ ರೀತಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮದಲ್ಲಿ ಕಳೆದ 2 ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ಗಳಿಲ್ಲದೆ ತಾಲೂಕಿನ ಹೋಚಿಹಳ್ಳಿ, ನಿಡಘಟ್ಟ ಗ್ರಾಮಗಳಿಗೆ ತೆರಳಿ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಬಳಿ ಸಾಕಷ್ಟು ಭಾರಿ ಮನವಿ ಮಾಡಿದರೂ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ಚರಂಡಿ ಮತ್ತಿತರರ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ ಎಂದು ದೂರಿದ ಅವರು ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ತಾಪಂ ಇಒ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು.ಬಳಿಕ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಖರಾಯಪಟ್ಟಣ ಪಿಎಸ್ಐ ಪವನ್ ಕುಮಾರ್ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಿ ಗ್ರಾಮದ ನೀರಿನ ಸಮಸ್ಯೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಕಚೇರಿ ಬೀಗ ತೆರೆದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಬಳಿಕ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಪ್ರಕಾಶ್ ಮಾತನಾಡಿ, ಈಗಾಗಲೇ ತಮ್ಮ ಇಲಾಖೆಯಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಪೂರ್ಣಗೊಳಿಸ ಲಾಗಿದೆ. ನೀರು ವಿತರಣೆಯಲ್ಲಿ ಪಂಚಾಯಿತಿ ಕಡೆಯಿಂದ ವ್ಯತ್ಯಾಸ ಕಂಡು ಬಂದಿದೆ. ಸಮಸ್ಯೆ ಬಗೆಹರಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲೇಶ್, ನಾಗರಾಜ್, ಪಟೇಲ್ ಜಗದೀಶ್, ಮಂಜಣ್ಣ, ತಗರೇಬೇಟೆ ಗೌಡರು, ಅಭಿಷೇಕ್, ನಂಜೇಶಪ್ಪ, ಕುಬೇರಪ್ಪ, ರಾಮಚಂದ್ರ, ಗಂಗಶೆಟ್ಟರು ಮತ್ತಿತರಿದ್ದರು.
12ಕೆಕೆಡಿಯು2..ಕಡೂರು ತಾಲೂಕಿನ ನಾಗಾರಾಳು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯ ವಹಿಸಿದ ಪಂಚಾಯಿತಿ ಅಧಿಕಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಗ್ರಾಮಸ್ಥರು ಪಂಚಾಯಿತಿ ಬೀಗಹಾಕಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಎನ್. ಸಿ. ಚಂದ್ರಶೇಖರ, ಮಲ್ಲೇಶ್, ಜಗದೀಶ್ ಮತ್ತಿತರಿದ್ದರು.