ಗುತ್ತಲದ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ

| Published : Jan 05 2025, 01:31 AM IST

ಸಾರಾಂಶ

ರೈತ ಸಂಪರ್ಕ ಕೇಂದ್ರದಿಂದ ಪಡೆಯಲಾದ ಕಳಪೆ ಗುಣಮಟ್ಟದ ಶೇಂಗಾ ಹಾಗೂ ಮೆಕ್ಕೆಜೋಳದ ಬೀಜಗಳನ್ನು ಬಿತ್ತಿ ಹಾನಿಗೊಳಗಾದ ರೈತರು ಶನಿವಾರ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಗುತ್ತಲ: ರೈತ ಸಂಪರ್ಕ ಕೇಂದ್ರದಿಂದ ಪಡೆಯಲಾದ ಕಳಪೆ ಗುಣಮಟ್ಟದ ಶೇಂಗಾ ಹಾಗೂ ಮೆಕ್ಕೆಜೋಳದ ಬೀಜಗಳನ್ನು ಬಿತ್ತಿ ಹಾನಿಗೊಳಗಾದ ರೈತರು ಶನಿವಾರ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.

ಶಾಕಾರ ಗ್ರಾಮದಲ್ಲಿನ ಸುಮಾರು 25 ಎಕರೆ ಜಮೀನು ಸೇರಿದಂತೆ ಗುತ್ತಲ ಹಾಗೂ ಇತರೆ ಗ್ರಾಮಗಳಲ್ಲಿನ ಸುಮಾರು 43 ಎಕರೆ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಬೀಜಗಳನ್ನು ಬಿತ್ತಿದ್ದ ರೈತರು ಬೆಳೆ ಬೆಳೆಯದೆ ಹಾನಿಗೆ ಒಳಗಾಗಿದ್ದರು. ಈ ಬಗ್ಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇದರಂತೆ ಕಡಲೆ ಹಾಗೂ ಮೆಕ್ಕೆಜೋಳದ ಬಿತ್ತೆನೆ ಬೀಜ ಪಡೆದು ಹಾನಿಗೆ ಒಳಗಾಗಿದ್ದ ರೈತರು ದೂರು ನೀಡಿದ್ದರು. ಶನಿವಾರ ಹಾನಿಗೊಳಗಾದ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಬೆಳಗ್ಗೆ ಆಗಮಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ರೈತರಿಂದ ಸಮಸ್ಯೆ ಆಲಿಸಿದರು. ಬಿತ್ತನೆ ಮಾಡಿರುವ ಬೀಜಗಳು ಬೆಳೆಯದೆ ಹಾನಿಗೆ ಒಳಗಾಗಿದ್ದೇವೆ. ನಮಗೆ ಪರಿಹಾರ ಬೇಕೆಂದು ರೈತರ ಆಗ್ರಹಿಸಿದರು. ಈ ವೇಳೆ ಬಿತ್ತನೆ ಬೀಜ ವಿತರಿಸಿದ್ದ ಕಂಪನಿಯ ಅಧಿಕಾರಿಯೊಂದಿಗೆ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್., ಹಾನಿಗೊಳಗಾದ ರೈತರು ಎಷ್ಟು ಬೀಜಗಳನ್ನು ಪಡೆದಿದ್ದರೋ ಅಷ್ಟೇ ಬಿತ್ತನೆ ಬೀಜಗಳನ್ನು ಸೋಮವಾರ ನೀಡುವುದಾಗಿ ಭರವಸೆ ನೀಡಿದರು. ಆದರೆ ರೈತರು ನಮಗೆ ಹಾಕಿರುವ ಗೊಬ್ಬರ ಹಾಗೂ ಹಾನಿಯನ್ನು ನೀಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಈರಪ್ಪ ಲಮಾಣಿ ರೈತರ ಸಮಸ್ಯೆಗಳನ್ನು ಸಹಾಯಕ ಕೃಷಿ ನಿರ್ದೇಶಕ ಅಧಿಕಾರಿಗೆ ತಿಳಿಸಿ ಸೂಕ್ತ ಪರಿಹಾರದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ.ಪಂ. ಮಾಜಿ ಸದಸ್ಯ ಗುಡ್ಡಪ್ಪ ಗೊರವರ ಮಾತನಾಡಿ, ಸಾಮಾನ್ಯ ಸಭೆಗೆ ಕೃಷಿ ಇಲಾಖೆಯ ಅಧಿಕಾರಿಗಳು ಬಾರದೇ ಇರುವದಕ್ಕೆ ಹಾಗೂ ಕೃಷಿ ಇಲಾಖೆಯ ಯೋಜನೆಗಳನ್ನು ಪಟ್ಟಣದ ಜನತೆಗೆ ತಿಳಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ನಂತರ ರೈತರೊಬ್ಬರು ಬಿತ್ತನೆ ಬೀಜಗಳನ್ನು ಆದಷ್ಟು ಬೇಗನೆ ನೀಡಿ ಎಂದು ಖಾಸಗಿ ಕಂಪನಿಯ ಅಧಿಕಾರಿಗೆ ದೂರವಾಣಿ ಮೂಲಕ ವಿನಂತಿಸಿದಾಗ ಎಕರೆಗೆ ಒಂದೇ ಪ್ಯಾಕೆಟ್‌ ಮಾತ್ರ ನೀಡುವುದಾಗಿ ಖಾಸಗಿ ಕಂಪನೆಯ ಅಧಿಕಾರಿ ತಿಳಿಸಿದ್ದಾರೆ. ಇದರಿಂದ ಪುನಃ ಆಕ್ರೋಶಗೊಂಡ ರೈತರು ಸೋಮವಾರ ಮತ್ತೇ ಆಗಮಿಸಿ ಪ್ರತಿಭಟನೆ ನಡೆಸುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಿವಕುಮಾರ ತಾವರಗೊಂದಿ, ಕರಬಸಪ್ಪ ಪೂಜಾರ, ಪರಶುರಾಮ ಗಿರಿಯಪ್ಪನವರ, ನಾಗಪ್ಪ ಬೆಂಡಿಗೇರಿ, ಸುರೇಶ ಹೊಸಗೌಡ್ರ, ಲಕ್ಕನಗೌಡ ಹೊಸಗೌಡ್ರ, ಹನುಮಂತಪ್ಪ ಬೆಂಡಿಗೇರಿ, ಲಕ್ಕಪ್ಪ ಬ್ಯಾಲಹುಣಸಿ, ನಾಗಪ್ಪ ಪೂಜಾರ, ಉಮೇಶ ಸಾವಳಗಿ, ರಮೇಶ ಬೆಂಡಿಗೇರಿ ಸೇರಿದಂತೆ ಅನೇಕರಿದ್ದರು. ಕಡಲೆಗೆ ಸಿಡಿರೋಗ ತಗುಲಿ ಹಾನಿ ಆಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದರೆ ರೈತರಿಗೆ ಕಳಪೆ ಗುಣ ಮಟ್ಟದ ಬೀಜಗಳನ್ನು ನೀಡಿದ್ದಾರೆ ಇದರಿಂದ ಕಡಲೆ ಸಹ ಹಾನಿಗೆ ಒಳಗಾಗಿದೆ ಎಂದು ಕೆಲ ರೈತರು ಆರೋಪಿಸಿದರು.ನನ್ನ ಹಾಗೂ ನನ್ನ ಕುಟುಂಬದ ಮತ್ತೊಂದು ಜಮೀನು ಸೇರಿ ಒಟ್ಟು 10 ಎಕರೆ ಪ್ರದೇಶಲ್ಲಿ ಬೆಳೆದಿದ್ದ ಮೆಕ್ಕಜೋಳದ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ ಹೋದ ನಂತರ ವರದಿಯನ್ನು ಕಳುಹಿಸಿದ್ದು ನಮ್ಮ ಹೆಸರುಗಳೇ ಬದಲಾವಣೆಯಾಗಿದೆ. ಹಾನಿಗೆ ಒಳಗಾದ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಹಾನಿಗೆ ಒಳಗಾದ ರೈತ ಪರಶುರಾಮ ಗಿರಿಯಪ್ಪನವರ ಹೇಳಿದರು.ಶೇಂಗಾ ಬಿತ್ತನೆ ಬೀಜ ಪಡೆದು ಹಾನಿಗೆ ಒಳಗಾದ ಸುಮಾರು 23 ಎಕರೆ ಪ್ರದೇಶದ ಸರ್ವೆ ಆಗಿದೆ. 23 ಎಕರೆ ಪ್ರದೇಶಕ್ಕೆ ಬಿತ್ತನೆ ಬೀಜಗಳನ್ನು ಪುನಃ ಕೊಡಲಾಗುವುದು. ಇನ್ನೂ ಹಾನಿಗೆ ಒಳಗಾದ ಉಳಿದ ರೈತರ ಜಮೀನುಗಳನ್ನು ಸರ್ವೆ ಮಾಡಿ ಅವರಿಗೂ ಸಹ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಹಾವೇರಿ ಎಡಿಎ ವೀರಭದ್ರಪ್ಪ ಬಿ.ಎಚ್‌. ಹೇಳಿದರು.