ಸಾರಾಂಶ
ಕೇಂದ್ರ ಗೃಹ ಸಚಿವರು ನೂತನ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸದೆ ಆತುರವಾಗಿ ನಿರ್ಣಯ ಕೈಗೊಂಡಿದ್ದು, ಈ ಕೂಡಲೇ ಚಾಲಕರಿಗೆ ಮಾರಕವಾಗಿರುವ ಕಾನೂನನ್ನು ಹಿಂಪಡೆಯಬೇಕು, ಅಲ್ಲಿಯವರೆವಿಗೆ ಲಾರಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ನಮ್ಮ ಧರಣಿ ಮುಂದುವರೆಸುತ್ತಿದ್ದೇವೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ವಾಹನ ಚಾಲಕರಿಗೆ 10 ವರ್ಷ ಕಠಿಣ ಶಿಕ್ಷೆ 7 ಲಕ್ಷವರೆಗೆ ಬಾರೀ ಪ್ರಮಾಣದ ದಂಡ ವಿಧಿಸುವಂತಹ ಕಾನೂನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಗುರುವಾರ ಲಾರಿ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿ, ಪ್ರತಿಭಟಿಸಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು ಪಟ್ಟಣದ ಹುಲ್ಲಹಳ್ಳಿ ವೃತ್ತದವರೆವಿಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ ಹುಲ್ಲಹಳ್ಳಿ ವೃತ್ತದ ಬಳಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಲಾರಿ ಚಾಲಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಕಾಯ್ದೆಯು ವಾಹನ ಚಾಲಕರ ಮನೋ ಸ್ಥೈರ್ಯವನ್ನು ಕುಗ್ಗಿಸುವಂತಹ ಕಾನೂನಾಗಿದೆ. ವಾಹನ ಚಾಲಕರ ಬಳಿ 7 ಲಕ್ಷದವರೆಗೆ ಹಣವಿದ್ದರೆ ಈ ವಾಹನ ಚಾಲನೆ ವೃತ್ತಿಯನ್ನೇ ಅವಲಂಭಿಸಿದೆ ಅನ್ಯ ಉದ್ಯೋಗ ಮಾಡಲಿದ್ದಾರೆ. ಅಪಘಾತ ಉದ್ದೇಶ ಪೂರ್ವಕವಾಗಿ ನಡೆಯುವುದಿಲ್ಲ ಅಂತಹ ಸಂದರ್ಭದಲ್ಲಿ ಚಾಲಕರಿಗೆ 10 ವರ್ಷ ಜೈಲು, 7 ಲಕ್ಷದವರೆಗೆ ದಂಡ ವಿವಿಧಿಸುವ ಕಾನೂನು ಜಾರಿಯಾದರೆ ನಾವು ಚಾಲಕ ವೃತ್ತಿಯನ್ನೇ ತೊರೆಯಲಿದ್ದೇವೆ. ನಮ್ಮ ಚಾಲನಾ ಪರವಾನಗಿಯನ್ನು ಹಿಂಪಡೆದು ಅನ್ಯ ಉದ್ಯೋಗ ದೊರಕಿಸಿಕೊಡಿ ಎಂದು ತಮ್ಮ ಡಿಎಲ್ ಗಳನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಗೃಹ ಸಚಿವರು ನೂತನ ಕಾಯ್ದೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸದೆ ಆತುರವಾಗಿ ನಿರ್ಣಯ ಕೈಗೊಂಡಿದ್ದು, ಈ ಕೂಡಲೇ ಚಾಲಕರಿಗೆ ಮಾರಕವಾಗಿರುವ ಕಾನೂನನ್ನು ಹಿಂಪಡೆಯಬೇಕು, ಅಲ್ಲಿಯವರೆವಿಗೆ ಲಾರಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಿ ನಮ್ಮ ಧರಣಿ ಮುಂದುವರೆಸುತ್ತಿದ್ದೇವೆ ಎಂದರು.
ಗೌರವಾಧ್ಯಕ್ಷ ವಿಶ್ವನಾಥ್ ಮಾತನಾಡಿ, ಚಾಲಕರು ನಿರ್ಭೀತಿಯಿಂದ ಚಾಲನೆಯಲ್ಲಿ ತೊಡಗುವಂತಹ ವಾತಾವರಣವನ್ನು ಕೇಂದ್ರ ಸರ್ಕಾರ ಕಲ್ಪಿಸಿಕೊಡಬೇಕು, ಚಾಲಕರಿಗೆ ಹೆದ್ದಾರಿಗಳಲ್ಲಿ ವಿಶ್ರಾಂತಿ ಕೇಂದ್ರ ತೆರೆಯಬೇಕು ಮತ್ತು ಚಾಲಕರಿಗೆ ಮಾರಕವಾಗಿದ್ದು, ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತುವ ಸಲುವಾಗಿ ಈ ಅನಿರ್ಧಿಷ್ಠಾವಧಿ ಲಾರಿ ಮುಷ್ಕರ ಹಮ್ಮಿಕೊಂಡಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ತಮ್ಮ ನಿಲುವು ಬದಲಿಸದಿದ್ದಲ್ಲಿ ನಾಳೆಯಿಂದ ಅಗತ್ಯ ವಸ್ತುಗಳ ಸೇವೆಯನ್ನು ನಿಲ್ಲಿಸಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.ಬಣ್ಣಾರಿ ಅಮ್ಮನ್ ಶುಗರ್ಸ್‌ಕಾರ್ಖಾನೆಯ ಲಾರಿ ಚಾಲಕರು, ಲಾರಿ ಚಾಲಕರ ಪರಿಷತ್ ಸದಸ್ಯರು, ಲಾರಿ ಮಾಲೀಕರ ಸಂಘದವರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೊಂದಂಡರಾಮು, ಲಾರಿ ಚಾಲಕರ ಪರಿಷತ್ ರಾಜ್ಯಾಧ್ಯಕ್ಷ ರಾಜೇಂದ್ರ, ಚಾಲಕರಾದ ಶ್ರೀನಿವಾಸ್, ಸುರೇಶ್, ರಾಜು, ರಫೀಕ್ ಪಾಷ, ಸ್ವಾಮಿ, ಅಭಿ, ನಿಂಗರಾಜು, ಉಮೇಶ, ಇದ್ದರು.