ನಿವೇಶನ ಹಂಚಿಕೆಗೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರ ಪ್ರತಿಭಟನೆ

| Published : Jun 25 2024, 12:36 AM IST

ನಿವೇಶನ ಹಂಚಿಕೆಗೆ ಆಗ್ರಹಿಸಿ ಆಶ್ರಯ ಹೋರಾಟ ಸಮಿತಿ ಸದಸ್ಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಕಟ್ಟಡ ಸಹಿತ ನಿವೇಶನ ನೀಡಬೇಕಾಗಿದ್ದ ಪುರಸಭೆ ಆಡಳಿತ ಮಂಡಳಿ ಕಳೆದ 8 ವರ್ಷದಿಂದ ಸತಾಯಿಸುತ್ತ ಬಂದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಪಟ್ಟಣದ ನಿವೇಶನ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಮಲ್ಲೂರ ರಸ್ತೆಯಲ್ಲಿ ಖರೀದಿಸಲಾದ 10 ಏಕರೆ ಜಾಗದಲ್ಲಿ ಕೂಡಲೇ ನಿವೇಶನ ಹಂಚಿಕೆ ಮಾಡುವಂತೆ ಆಶ್ರಯ ಹೋರಾಟ ಸಮಿತಿ ಸದಸ್ಯರು ನೂರಾರು ಫಲಾನುಭವಿಗಳೊಂದಿಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ಬಳಿಕ ಪುರಸಭೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಪಟ್ಟಣದ ಸುಭಾಸ್ ಸರ್ಕಲ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಮುಖ್ಯರಸ್ತೆ, ಬೀರೇಶ್ವರ ದೇವಸ್ಥಾನ ರಸ್ತೆ ಮೂಲಕ ಪುರಸಭೆ ಆವರಣ ತಲುಪಿತು. ಈ ವೇಳೆ ಪುರಸಭೆ ಆಡಳಿತ ಮಂಡಳಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರಲ್ಲದೇ ನಿವೇಶನ ಹಂಚಿಕೆ ಮಾಡುವ ವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.ಈ ವೇಳೆ ಮಾತನಾಡಿದ ಫರೀದಾಬಾನು ನದೀಮುಲ್ಲಾ, ಬಡ ಫಲಾನುಭವಿಗಳಿಂದ ತಲಾ ₹30 ಸಾವಿರ ಕಟ್ಟಿಸಿಕೊಂಡು ವಸತಿ ರಹಿತ ಬಡವರಿಗೆ ಆಶ್ರಯ ಯೋಜನೆಯಡಿ ಕಟ್ಟಡ ಸಹಿತ ನಿವೇಶನ ನೀಡಬೇಕಾಗಿದ್ದ ಪುರಸಭೆ ಆಡಳಿತ ಮಂಡಳಿ ಕಳೆದ 8 ವರ್ಷದಿಂದ ಸತಾಯಿಸುತ್ತ ಬಂದಿದೆ. ಇಂತಹ ಬೇಜವಾಬ್ದಾರಿ ವರ್ತನೆ ಖಂಡಿಸಿ ಫಲಾನುಭವಿಗಳೊಂದಿಗೆ ಪುರಸಭೆ ಕಾರ‍್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯ. ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಧರಣಿ ಮುಂವರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನ್ಯಾಯವಾದಿ ಸುರೇಶ ಛಲವಾದಿ ಮಾತನಾಡಿ, ಮನೆಯಿಲ್ಲದ ಅರ್ಹ ಬಡವರು ₹30 ಸಾವಿರ ಹೊಂದಿಸಲಾಗದೇ ನಿವೇಶನ ಇಲ್ಲದೇ ಉಳಿದಿದ್ದಾರೆ. ಇದರಿಂದ ಉಳ್ಳವರೇ ₹30 ಸಾವಿರ ಭರಣ ಮಾಡಿ ಮತ್ತೆ ಮನೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ನಿವೇಶನ ಕೊಡಿಸುವುದಾಗಿ ₹50 ಸಾವಿರದಿಂದ ₹1 ಲಕ್ಷದ ವರೆಗೆ ಬಡವರಿಂದ ಹಣವನ್ನು ಅನಧಿಕೃತವಾಗಿ ಪಡೆಯಲಾಗಿದೆ, ಕೂಡಲೇ ನಿಯಮಾನುಸಾರ ಆಯ್ಕೆಯಾದ ಅರ್ಹ ಫಲಾನುಭವಿಗಳ ಪಟ್ಟಿ ಸಾರ್ವಜನಿಕವಾಗಿ ಪ್ರಕಟಿಸಿ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಹೋರಾಟ ನಿರಂತರವಾಗಿ ಸಾಗಲಿದೆ ಎಂದರು.

ಅನಧಿಕೃತವಾಗಿ ಹಣ ಸಂಗ್ರಹಣೆ

ನಿವೇಶನ ರಹಿತ 500ಕ್ಕೂ ಹೆಚ್ಚು ಫಲಾನುಭಗಳಿಂದ ತಲಾ ₹30 ಸಾವಿರ ಮುಂಗಡ ವಂತಿಗೆ ಹಣ ತುಂಬಿಸಿಕೊಳ್ಳಲಾಗಿದೆ. ಈ ಹಣವೇ ಒಟ್ಟು ₹1.74 ಕೋಟಿಯಾಗಿದೆ, ಇದನ್ನು ಬ್ಯಾಂಕ್‌ನಲ್ಲಿಟ್ಟು 2 ವರ್ಷ ಕಳೆದಿವೆ. ಅದಕ್ಕೆ ಬಡ್ಡಿಯೆಷ್ಟು ಮತ್ತು ವಂತಿಗೆ ಹಣ ಭರಣ ಮಾಡಿಕೊಳ್ಳಲು ರಾಜೀವಗಾಂಧಿ ವಸತಿ ನಿಗಮ ಲಿಖಿತ ಆದೇಶ ನೀಡಿದ್ದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಆಗ್ರಹಿಸಿದರು.

ಮನವೊಲಿಕೆ ವಿಫಲ

ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಪ್ರತಿಭಟನಕಾರ ಮನವೊಲಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಸರ್ಕಾರದ ನಿರ್ದೇಶನದಂತೆ ತಮ್ಮಿಂದ ಹಣ ಪಡೆಯಲಾಗಿದೆ, ಆಶ್ರಯ ಸಮಿತಿ ರಚನೆ ಬಳಿಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಹಂತದಲ್ಲಿ ಪುರಸಭೆ ಮುಖ್ಯಾಧಿಕಾರಿ ಅಥವಾ ಆಡಳಿತ ಮಂಡಳಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಟ್ಟು ತಾಳ್ಳೆಯಿಂದ ಇರುವಂತೆ ಮನವಿ ಮಾಡಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಎಚ್.ಬಿ. ಚೆನ್ನಪ್ಪ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ನಿಮ್ಮ ಸಮಾಧಾನದ ಮಾತು ನಮಗೆ ಬೇಕಿಲ್ಲ, ನಿವೇಶನಕ್ಕಾಗಿ ನಾವು ಅಷ್ಟಿಷ್ಟು ಕಷ್ಟಪಡುತ್ತಿಲ್ಲ. ಖಾಸಗಿ ಬ್ಯಾಂಕ್‌ಗಳಲ್ಲಿ ಬಂಗಾರ ಅಡವಿಟ್ಟು ಸಾಲ ಮಾಡಿ ವಂತಿಗೆ ಹಣ ₹30 ಸಾವಿರ ತುಂಬಿದ್ದೇವೆ. ಆಶ್ರಯ ಸಮಿತಿಗಳು ಮತ್ತು ಪುರಸಭೆ ಸದಸ್ಯರು ನಿವೇಶನ ಕೊಡಿಸುವುದಾಗಿ ನಮ್ಮನ್ನೇ ದೋಚಿದ್ದಾರೆ ಎಂದು ಆರೋಪಿಸಿದರಲ್ಲದೇ ಯಾವುದೇ ಕಾರಣಗಳನ್ನು ನೀಡದೆ ಕೂಡಲೇ ಉಚಿತವಾಗಿ ನಿವೇಶನ ಹಂಚಿಕೆ ಮಾಡುವಂತೆ ಆಗ್ರಹಿಸಿದರು. ಅಲ್ಲದೆ ಪ್ರತಿಭಟನೆ ವಾಪಸ್ ಪಡೆಯವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಅಲ್ಲದೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಬಿಗಿಪಟ್ಟು ಹಿಡಿದರು. ಈ ವೇಳೆ ಪಾಂಡು ಸುತಾರ, ವಿನಾಯಕ ಕಂಬಳಿ, ಮುಮ್ತಾಜ ಬೆಟಗೇರಿ, ಮಂಜುಳಾ ಬಂಡಿವಡ್ಡರ ಸಾವಿತ್ರಿ ಮಾಳಪ್ಪನವರ, ಬಿಬಿಜಾನ್ ಕೂರಗುಂದ, ಶಾರದಾ ಭಜಂತ್ರಿ, ಮಲ್ಲಮ್ಮ ಗಡ್ಡೇರ, ನಾಗಮ್ಮ ಹಲಗೇರಿ, ಜಮೀಲಾಬಿ ತಾಳಿಕೋಟಿ, ಸುಧಾ ಆಡಿನವರ, ಲತಾ ಕೊರಗರ ಲಲಿತವ್ವ ಕೊರಗರ, ಸೈನಾಜಿ ಜಕಾತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ಥಳಕ್ಕೆ ಬಾರದ ಸದಸ್ಯರು

ನಿವೇಶನ ಹಂಚಿಕೆ ಕಳೆದ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದೆ. ಎರಡು ಪೂರ್ಣಾವಧಿ ಸರ್ಕಾರಗಳು ಮೂವರು ಶಾಸಕರು ಅಧಿಕಾರ ನಡೆಸಿದರೂ ಇಲ್ಲಿಯರೆಗೂ ಪಟ್ಟಣಲ್ಲಿನ ನಿವೇಶನ ಹಂಚಿಕೆ ಮಾತ್ರ ಆಗಿಲ್ಲ, ವಂತಿಕೆ ಹಣ ಕಟ್ಟಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಳಂಬವೇಕೆ? ಉತ್ತರ ಕೊಡಬೇಕಿದ್ದ ಪುರಸಭೆ ಸದಸ್ಯರು ಪ್ರತಿಭಟನೆ ನಡೆಯುತ್ತಿದ್ದರೂ ಯಾರೊಬ್ಬರು ಸ್ಥಳಕ್ಕೆ ಬಾರದೇ ದೂರ ಉಳಿದರು. ಇದು ಪ್ರತಿಭಟನಾಕಾರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.

ಆವರಣದಲ್ಲಿ ಅಡುಗೆ

ನಿವೇಶನ ಹಂಚಿಕೆ ಮಾಡುವವರೆಗೂ ಧರಣಿ ಕೈ ಬಿಡುವ ಮಾತೇ ಇಲ್ಲ ಎಂದು ಪಟ್ಟು ಹಿಡಿದಿರುವ ಪ್ರತಿಭಟನಕಾರರು, ಪುರಸಭೆ ಆವರಣದಲ್ಲಿಯೇ ಸೋಮವಾರ ಮಧ್ಯಾಹ್ನ ಅಡುಗೆ ಮಾಡಿ ಊಟ ಮಾಡಿ ಧರಣಿ ಮುಂದುವರಿಸಿದ್ದಾರೆ.