ಸಾರಾಂಶ
ಮುಂಡಗೋಡ: ಶಿರಸಿ-ಹುಬ್ಬಳ್ಳಿ ಹೆದ್ದಾರಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಮಂಗಳವಾರ ತಾಲೂಕಿನ ಸಾಲಗಾಂವ ಬಾಣಂತಿದೇವಿ ದೇವಾಲಯ ಬಳಿ ರಸ್ತೆ ಮಧ್ಯೆ ಬಿದ್ದಿರುವ ಗುಂಡಿಗಳಲ್ಲಿ ತೆಂಗಿನ ಗಿಡ ನೆಟ್ಟು ಕೆಲ ಕಾಲ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.ದೇವಾಲಯ ಬಳಿ ಜಮಾಯಿಸಿದ ಗ್ರಾಮಸ್ಥರು, ಜೆಡಿಎಸ್ ಕಾರ್ಯಕರ್ತರು, ಕೆಲ ಕಾಲ ಪ್ರತಿಭಟನೆ ನಡೆಸಿ ಬಳಿಕ ತಹಸೀಲ್ದಾರಗೆ ಮನವಿ ಸಲ್ಲಿಸಿದರು. ರಸ್ತೆ ಸಂಪೂರ್ಣ ತಗ್ಗು ಗುಂಡಿಗಳಿಂದ ಕೂಡಿದೆ. ವಾಹನಗಳು ಸಂಚರಿಸದಂತಹ ಪರಿಸ್ಥಿತಿಗೆ ತಲುಪಿದೆ. ವಾಹನಗಳು ಗುಂಡಿಗೆ ಬಿದ್ದು, ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ಅಲ್ಲದೇ ಸಾಕಷ್ಟು ಅಪಘಾತಗಳು ಕೂಡ ಸಂಭವಿಸುತ್ತಿವೆ. ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ನಲ್ಲಿ ರೋಗಿಗಳನ್ನು ಹುಬ್ಬಳ್ಳಿಗೆ ಸಾಗಿಸಬೇಕಾದರೆ ಹಾಳಾದ ರಸ್ತೆಯಿಂದ ಆಸ್ಪತ್ರೆಗೆ ತಲುಪುವುದು ವಿಳಂಬವಾಗುತ್ತಿದೆ. ಇದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಈ ಬಗ್ಗೆ ಗಮನಹರಿಸಿ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಮುತ್ತುರಾಜ ಸಂಗೂರಮಠ, ಪರಶುರಾಮ ಅಂತೋಜಿ, ವಿನೋದ ಬೆಂಡ್ಲಗಟ್ಟಿ, ಚಂದ್ರಣ್ಣ ಲಮಾಣಿ, ವಿಪಿನ್ ಕುಮಾರ ಸಾಹ್, ಮಂಜುನಾಥ ಮಿಟಾಯಿಗಾರ, ಚಂದ್ರಕಾಂತ ಬಂಗಿ ಪರಶುರಾಮ ಉಪ್ಪಾರ, ಶರಣಪ್ಪ ಶೆಡ್ರವಳ್ಳಿ, ಸತೀಶ ಬಂಗಿ, ಗುತ್ತೆಪ್ಪ ಉಪ್ಪಾರ ಮುಂತಾದವರು ಉಪಸ್ಥಿತರಿದ್ದರು.ಶಿರಸಿ-ಹುಬ್ಬಳ್ಳಿ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಮುಂಡಗೋಡ ತಾಲೂಕಿನ ಸಾಲಗಾಂವ ಬಾಣಂತಿದೇವಿ ದೇವಾಲಯ ಬಳಿ ರಸ್ತೆ ಮಧ್ಯ ಗುಂಡಿಗಳಲ್ಲಿ ತೆಂಗಿನ ಗಿಡ ನೆಟ್ಟು ಪ್ರತಿಭಟಿಸಲಾಯಿತು.