ಸಂಘದ ಕಾರವಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ತಾಲೂಕಿನ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಿಸಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಹಕರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಕಾರವಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಬಹುದಿನಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ. 17ರಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಎಲ್ಲ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಲು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರವಾರ ಘಟಕ ನಿರ್ಧರಿಸಿದೆ.ಸಂಘದ ಕಾರವಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಂದು ತಾಲೂಕಿನ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಿಸಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಹಕರಿಸಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.ಕೇಂದ್ರ ಸಮಿತಿಯು ಈಗಾಗಲೇ ಎಲ್ಲ ಆಡಳಿತ ಮಂಡಳಿಗಳು ಹಾಗೂ ಶಿಕ್ಷಣ ಇಲಾಖೆಗೆ ಪ್ರತಿಭಟನೆ ಕುರಿತು ಲಿಖಿತ ಮಾಹಿತಿ ನೀಡಿದೆ. ನ. 17ರಂದು ಕಾರವಾರ ತಾಲೂಕಿನ ಎಲ್ಲ ಶಾಲೆಗಳ ನೌಕರರು ಧಾರವಾಡದ ಕಡಪ ಮೈದಾನದಲ್ಲಿ ಸೇರಿ, ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಿದ್ದಾರೆ.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕಾಧ್ಯಕ್ಷ ಜೈ ರಂಗನಾಥ್ ಬಿ.ಎಸ್. ಮಾತನಾಡಿ, ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಲ್ಲ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ತಾಲೂಕಿನ ಎಲ್ಲ ಆಡಳಿತ ಮಂಡಳಿಗಳಿಗೆ ವಿನಂತಿ ಪತ್ರ ನೀಡಲಾಗಿದೆ ಎಂದರು.ಸಭೆಯಲ್ಲಿ ಕಿನ್ನರ ಪ್ರೌಢಶಾಲೆಯ ಸಂದೀಪ್ ನಾಯಕ, ರಾಣಿ ಸೋಮನಾಥ ಬಿಳಿಗಾ ಪ್ರೌಢಶಾಲೆಯ ಎಂ.ಡಿ. ಕುಮಶಿ, ಚಂಡಿಯಾ ಪ್ರೌಢಶಾಲೆಯ ಸುಜಾತಾ ನಾಯಕ್, ಹಿಂದೂ ಪ್ರೌಢಶಾಲೆಯ ರೋಹಿದಾಸ್ ದೇಶಭಂಡಾರಿ, ಸುಮತಿ ದಾಮ್ಲೆ ಪ್ರೌಢಶಾಲೆಯ ಸಮೀಂದ್ರ ನಾಯ್ಕ್, ಸಂಜಯ್ ನಾಯ್ಕ್, ವಿಕಾಸ್ ಕೊಟಾರ್ಕರ್, ವಿಕ್ರಾಂತ್ ತಾಂಡೇಲ್, ಶೋಭಾ ದೇಸಾಯಿ, ಸದಾಶಿವಗಡ ಪ್ರೌಢಶಾಲೆಯ ಮುದುಗೇಕರ್, ಸಂತೋಷ್ ಮಿರಾಸಿ, ದಯಾನಂದ, ಪ್ರಮೋದ್ ನಾಯಕ್, ಶಿವಾಜಿ ಶಿಕ್ಷಣ ಸಂಸ್ಥೆಯ ಮಹೇಶ್ ಸಾವಂತ್, ಅಶೋಕ್ ಹರಳಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.