ಪುರಸಭೆ ಹೊರಗುತ್ತಿಗೆ ನೌಕರರಿಗೆ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳ ವೇತನವನ್ನು ಚೆಕ್ ಮುಖೇನ ನೀಡಲಾಗಿದೆ. ಶೀಘ್ರ ಕನಿಷ್ಠ ವೇತನ ನೌಕರರ ವೇತನ ಪಾವತಿ ಮಾಡುತ್ತೇವೆ
ಹೊರಗುತ್ತಿಗೆ ನೌಕರರ ವೇತನ ಸಮಸ್ಯೆ । ಕನಿಷ್ಠ ವೇತನ ನೌಕರರ ಶೀಘ್ರ ಸಂಬಳ
ಬಂಟ್ವಾಳ: ಪುರಸಭೆ ಹೊರಗುತ್ತಿಗೆ ನೌಕರರಿಗೆ ನವೆಂಬರ್ ಮತ್ತು ಡಿಸೆಂಬರ್ ಎರಡು ತಿಂಗಳ ವೇತನವನ್ನು ಚೆಕ್ ಮುಖೇನ ನೀಡಲಾಗಿದೆ. ಶೀಘ್ರ ಕನಿಷ್ಠ ವೇತನ ನೌಕರರ ವೇತನ ಪಾವತಿ ಮಾಡುತ್ತೇವೆ ಎಂದು ಯೋಜನಾ ನಿರ್ದೇಶಕ ಡಾ. ಸಂತೋಷ್ ತಿಳಿಸಿದ್ದಾರೆ.ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಪಾವತಿ ಮಾಡುವಂತೆ ಪುರಸಭೆಯಲ್ಲಿ ಪ್ರತಿಭಟನೆ ನಿರತರಾಗಿದ್ದ ಹೊರಗುತ್ತಿಗೆ ಹಾಗೂ ಕನಿಷ್ಠ ವೇತನ ನೌಕರರ ಸಮಸ್ಯೆ ಆಲಿಸಿ ಮಾತನಾಡಿದರು.2 ನೇ ಬಾರಿ ಪ್ರತಿಭಟನೆಜ.6 ರಂದು ಎರಡು ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ನೌಕರರು ಪ್ರತಿಭಟನೆ ನಡೆಸಿದ್ದರು. ನೌಕರರ ಬೇಡಿಕೆ ಈಡೇರಿಸಿರುವ ಭರವಸೆ ನೀಡಿದ ಮುಖ್ಯಾಧಿಕಾರಿ ಸಿದ್ದಾರ್ಥ ಅವರು ಪ್ರತಿಭಟನೆಯನ್ನು ಹಿಂಪಡೆದು ಕೆಲಸಕ್ಕೆ ಹಾಜರಾಗುವಂತೆ ಮನವೊಲಿಸಿದ್ದರು. ಪ್ರತಿಭಟನೆ ನಡೆದು 15 ದಿನಗಳಾದರೂ ನೌಕರರ ವೇತನ ಪಾವತಿ ನಡೆಯದಿರುವ ಕಾರಣ ಗುರುವಾರ ಮತ್ತೆ ನೌಕರರು ಎರಡನೇ ಬಾರಿ ಕೆಲಸ ಸ್ಥಗಿತಗೊಳಿಸಿ ಪುರಸಭೆಯ ಮೆಟ್ಟಿಲ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಅತ್ತ ಪ್ರತಿಭಟನೆ, ಇತ್ತ ನೀರು ಸ್ಥಗಿತನೌಕರರು ಕೆಲಸ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸ್ಥಗಿತಗೊಂಡಿತ್ತು. ಕಚೇರಿಯೊಳಗಿನ ಕೆಲಸಗಳು ಬಾಕಿಯಾಗಿ ಜನರು ಬಂದು ವಾಪಾಸು ಹೋಗುವಂತಾಯಿತು.
ಪ್ರತಿಭಟನೆ ನಿರತರಾಗಿದ್ದ ನೌಕರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪಿಡಿ.ಸಂತೋಷ್, ಎ.ಇ.ಇ.ತೇಜೋಮೂರ್ತಿ, ಎಕ್ಸಿಕ್ಯುಟಿವ್ ಇಂಜಿನಿಯರ್ ಶಂಕರ್ ಮೂರ್ತಿ ಅವರು ಪುರಸಭಾ ಕಚೇರಿಗೆ ಆಗಮಿಸಿದರು. ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 3.45 ಗಂಟೆವರೆಗೆ ಅಧಿಕಾರಿಗಳು ಚರ್ಚೆ ನಡೆಸಿದರು. ಕೊನೆಗೆ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿ ಮಾಡಿದ್ದಾರೆ. ಇನ್ನು ಉಳಿದಿರುವ ಕನಿಷ್ಠ ವೇತನ ನೌಕರರ ವೇತನವನ್ನು ಸರ್ಕಾರದಿಂದ ನೀಡಲು ಕೆಲ ಸಮಸ್ಯೆಗಳಿದ್ದು, ಈವರೆಗೆ ದುಡಿದ ಕಾರ್ಮಿಕರ ವೇತನ ಪಾವತಿ ಮಾಡುತ್ತೇವೆ. ಮುಂದೆ ನಿಯಮ ಪ್ರಕಾರ ಟೆಂಡರ್ ಆಗಿದೆ. ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ಹಿಂದೆ ತಾಂತ್ರಿಕ ತೊಂದರೆಗಳ ಕಾರಣ ವೇತನ ಪಾವತಿಗೆ ಸಮಸ್ಯೆಯಾಗಿದೆ ಎಂದು ಯೋಜನಾ ನಿರ್ದೇಶಕರು ತಿಳಿಸಿದರು.ಹಿರಿಯ ಸದಸ್ಯ ಗೋವಿಂದ ಪ್ರಭು, ಹರಿಪ್ರಸಾದ್ ಮತ್ತು ಸಾಮಾಜಿಕ ಕಾರ್ಯಕರ್ತ ರೊನಾಲ್ಡ್ ಬಂಟ್ವಾಳ, ವಿಶ್ವನಾಥ ಗೌಡ ಮಣಿ, ಸಮಾದ್ ಕೈಕಂಬ, ಪ್ರೇಮನಾಥ್ ಬಂಟ್ವಾಳ, ಮತ್ತು ಗುತ್ತಿಗೆದಾರ ಭವಾನಿಶಂಕರ ಸೇರಿದಂತೆ ಪುರಸಭಾ ಸದಸ್ಯರು ಕೂಡ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು