ಸಾರಾಂಶ
ಪ್ರತಿಭಟನೆಯ ಬಳಿಕ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಜು.1, 2022ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ, ಕಮ್ಯೂಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು 7ನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನೀಡಬೇಕು ಹಾಗೂ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ನಿವೃತ್ತ ಸರ್ಕಾರಿ ನೌಕರರು ಕಪ್ಪು ಪಟ್ಟಿ ಧರಿಸಿಕೊಂಡು ನಗರದ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ನಿವೃತ್ತ ಸರ್ಕಾರಿ ನೌಕರರ ವೇದಿಕೆಯ ದ.ಕ. ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ, ಹಿರಿಯ ನಾಗರಿಕರ ದಿನಾಚರಣೆಯ ದಿನದಂದೇ ನಿವೃತ್ತ ಸರ್ಕಾರಿ ನೌಕರರನ್ನು ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ. ಸುದೀರ್ಘ ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಬೇಕು. ಇನ್ನಾದರೂ ಹಿರಿಯರಾದ ನಮ್ಮನ್ನು ಬೀದಿಗೆ ಇಳಿಯುವಂತೆ ಮಾಡಬೇಡಿ ಎಂದು ಒತ್ತಾಯಿಸಿದರು.
ನಾವು ಕೋವಿಡ್ ಸಮಯದಲ್ಲಿ ಸರ್ಕಾರದ ತುರ್ತು ಸೇವೆಗಳನ್ನು ನಿರ್ವಹಿಸಿದವರು. ಈಗಾಗಲೇ ನಮ್ಮ ಬೇಡಿಕೆಗಳನ್ನು ತಹಸೀಲ್ದಾರ್ ಮೂಲಕ ಆರ್ಥಿಕ ಇಲಾಖೆಗೂ ಕಳಿಸಿದ್ದೇವೆ. ರಾಜ್ಯವ್ಯಾಪಿ ಹಿರಿಯ ನಿವೃತ್ತ ನೌಕರರು ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.ಜಿಲ್ಲಾ ಸಂಚಾಲಕ ಸ್ಟ್ಯಾನಿ ತಾವ್ರೋ ಮಾತನಾಡಿ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಬೇಕು ಎಂದರು.
ಜಿಲ್ಲಾ ಸಂಚಾಲಕ ನಾರಾಯಣ ಪೂಜಾರಿ ಮಾತನಾಡಿ, ಹಕ್ಕಿನಲ್ಲಿ ಇರುವ ಸವಲತ್ತನ್ನು ನ್ಯಾಯಯುತವಾಗಿ ನೀಡಿ ಎನ್ನುವುದು ನಮ್ಮ ಮನವಿ. ಸಮಸ್ಯೆಗೆ ಪರಿಹಾರ ನೀಡಲು ತಕ್ಷಣವೇ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.ಸಂಚಾಲಕಿ ಮಂಜುಳಾ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆಯ ಬಳಿಕ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಸಲ್ಲಿಸಲಾಯಿತು.
ಹಿರಿಯ ಸರ್ಕಾರಿ ನೌಕರರಾದ ವಿಜಯ ಪೈ, ಮೋಹನ ಬಂಗೇರ, ಎನ್. ಆನಂದ ನಾಯ್ಕ್, ಹೇಮನಾಥ, ಜೆರಾಲ್ಡ್, ಭಾರತಿ ಪಿ.ವಿ ಮತ್ತಿತರರು ಇದ್ದರು.