ಸಾರಾಂಶ
ದಿನಗಳೆದಂತೆ ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅನೇಕ ಅಕ್ರಮಗಳು ಬಯಲಿಗೆ ಬರುತ್ತಿವೆ.
ಬಳ್ಳಾರಿ: ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಂಡಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಎನ್‌ಟಿಎ ನಡೆಸಿದ ನೀಟ್ ಪರೀಕ್ಷೆಯ ಅಕ್ರಮಗಳು ಪೋಷಕರಲ್ಲಿ ಆತಂಕ ಮೂಡಿಸಿದೆ. ದಿನಗಳೆದಂತೆ ನೀಟ್ ಪ್ರವೇಶ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅನೇಕ ಅಕ್ರಮಗಳು ಬಯಲಿಗೆ ಬರುತ್ತಿವೆ. ನೀಟ್ ಪ್ರವೇಶ ಪರೀಕ್ಷೆ ಹಗರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಚಿಂತೆಗೀಡು ಮಾಡಿದೆ.ಶಿಕ್ಷಣದ ಸ್ವಾಯತ್ತತೆಯನ್ನು ಹರಣಗೊಳಿಸಿ, ಎನ್‌ಟಿಎ ಪ್ರವೇಶ ಪರೀಕ್ಷೆಯನ್ನು ಕೇಂದ್ರೀಕರಣಗೊಳಿಸುತ್ತಿರುವುದು ಬಾರಿ ಅವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪ್ರತಿಭಟನಾಕಾರರು ದೂರಿದರು.
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಆರಂಭದಲ್ಲಿ, ಕೆಲವು ಸ್ಥಳಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಎಂಬ ವರದಿಗಳಿದ್ದವು. ಹಾಗೂ ಇತ್ತೀಚಿನ ವರದಿಗಳ ಪ್ರಕಾರ 67 ವಿದ್ಯಾರ್ಥಿಗಳು ಗರಿಷ್ಠ 720 ಅಂಕಗಳನ್ನು ಗಳಿಸಿದ್ದಾರೆ, ಇದು ಸಾಕಷ್ಟು ಅಸಹಜವಾಗಿದೆ. ಈ ಪೈಕಿ, ಯಾವುದೇ ಉಪನಾಮವಿಲ್ಲದ 8 ಟಾಪರ್‌ಗಳು ಹರಿಯಾಣದ ನಿರ್ದಿಷ್ಟ ಕೇಂದ್ರದಿಂದ ಬಂದವರಾಗಿದ್ದಾರೆ. ಕೆಲವರು ಅಸಾಧ್ಯವಾದ ರೀತಿಯಲ್ಲಿ 718 ಮತ್ತು 719 ಅಂಕಗಳನ್ನು ಗಳಿಸಿದ್ದಾರೆ. ಇವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ವಿಶ್ವಾಸರ್ಹತೆಯ ಮೇಲೆ ಗಂಭೀರವಾದ ಅನುಮಾನಗಳನ್ನು ಉಂಟುಮಾಡುವ ಕೆಲವು ಸ್ಪಷ್ಟವಾದ ವ್ಯತ್ಯಾಸಗಳಾಗಿವೆ ಎಂದು ದೂರಿದರಲ್ಲದೆ, ನಿಷ್ಟ್ರಯೋಜಕ, ಶಿಕ್ಷಣ ವಿರೋಧಿ ಜನತಾಂತ್ರಿಕ ವಿರೋಧಿ ಎನ್‌ಟಿಎಯನ್ನು ಹಾಗೂ ನೀಟ್‌ನ್ನು ರದ್ದುಗೊಳಿಸಬೇಕು ಮತ್ತು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶಕ್ಕಾಗಿ ರಾಜ್ಯವಾರು ಪ್ರವೇಶ ಪರೀಕ್ಷೆಗಳನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಸಮಿತಿಯ ಜಿಲ್ಲಾಧ್ಯಕ್ಷ ಆರ್.ಸೋಮಶೇಖರಗೌಡ, ನಾಗರತ್ನ ಸೇರಿದಂತೆ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.