ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹10 ಸಾವಿರ ಸಹಾಯಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಹಿರಿಯ ನಾಗರಿಕರು ಪ್ರತಿಭಟನಾ ಧರಣಿ ನಡೆಸಿದರು.ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ರಾಜ್ಯ ನಿವೃತ್ತ ನೌಕರರ ಮತ್ತು ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತ ಹಿರಿಯ ನಾಗರಿಕರ ಸಂಘ ಹಾಗೂ ಅರ್ಥಕ್ರಾಂತಿ ಮಂಚ್ ಸಹಯೋಗದಲ್ಲಿ ಪ್ರತಿಭಟನೆ ಮಾಡಿದ ಹಿರಿಯ ನಾಗರಿಕರು, ಮೌನವಾಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಆರೋಗ್ಯ, ರಕ್ಷಣೆ ಸೇರಿದಂತೆ ಮೂಲಕ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಮಾಸಿಕ ವೃದ್ದಾಪ್ಯ ವೇತನ ಕೇವಲ ಹತ್ತು ಪ್ರತಿಶತ ಹಿರಿಯರಿಗೆ ಮಾತ್ರ ವಿತರಿಸಲಾಗುತ್ತಿದೆ.ಈಚೆಗೆ ತಾಂತ್ರಿಕ ಕಾರಣ ನೀಡಿ, ರಾಜ್ಯದ ವೃದ್ಧಾಪ್ಯ ವೇತನ ಪಡೆಯುತ್ತಿದ್ದ ಅರ್ಧದಷ್ಟು ಹಿರಿಯರಿಗೆ ಸಿಗುತ್ತಿಲ್ಲ. ಈ ರೀತಿ ಹಿರಿಯ ನಾಗರಿಕರನ್ನು ನಿರ್ಲಕ್ಷಿಸುತ್ತಿರುವ ಸರ್ಕಾರಗಳಿಗೆ ಬಿಸಿ ಮುಟ್ಟಿಸಲು ಶೇ. 15ರಷ್ಟು ಮತ ಹೊಂದಿದ ಎಲ್ಲ ಹಿರಿಯರನ್ನು ಸಂಘಟಿಸಿ ಹಂತ ಹಂತವಾಗಿ ಜಾಗೃತಿ ಮೂಡಿಸಲಾಗುತ್ತಿದೆ.
ಈ ವೇಳೆ ಹಿರಿಯ ನಾಗರಿಕರು ಕಾನೂನು ಬದ್ಧವಾಗಿ ರಾಷ್ಟ್ರದ ಸಂಪತ್ತು ಎಂದು ಘೋಷಣೆ ಮಾಡಬೇಕು, ಆರ್ಥಿಕವಾಗಿ ದುರ್ಬಲರಾದ ಇಪಿಎಫ್ ನಿವೃತ್ತ ನೌಕರರು, ಕಾರ್ಮಿಕ ಕೂಲಿಕಾರರು ಹಾಗೂ ವೃದ್ದಾಪ್ಯ ವೇತನ ಪಡೆಯುತ್ತಿರುವ ಮುಂತಾದವರಿಗೆ ಪ್ರತಿ ತಿಂಗಳು ₹10 ಸಾವಿರ ಸರ್ಕಾರ ನೀಡಬೇಕೆಂದು ಒತ್ತಾಯಿಸಿದರು.ಎಲ್ಲ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸಾ ವೆಚ್ಚ, ಇನ್ಸೂರೆನ್ಸ್ ಸೌಲಭ್ಯ, ರಾಷ್ಟ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ (ಮಂತ್ರಾಲಯ) ಇಲಾಖೆ ಸ್ಥಾಪನೆ ಮಾಡುವುದು, ಎಲ್ಲ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಮಿತಿ ರಚಿಸಿ ಹಿರಿಯ ನಾಗರಿಕರ ಮೇಲಾಗುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ, ಧರಣೇಂದ್ರ ಜವಳಿ, ಎಂ.ಪಿ. ಕುಂಬಾರ, ಎಸ್.ಎಂ. ಕೊಳೂರ, ಆರ್.ಟಿ. ದೊಡಮನಿ, ರಾಜಶೇಖರ ಚಿಕ್ಕವೀರಮಠ, ಪಟ್ಟಣಶೆಟ್ಟಿ, ಪಿ.ಬಿ. ಹಿರೇಮಠ, ಎಸ್.ಎಂ. ಬಿದರಿ, ಡಿ.ಟಿ. ಪಾಟೀಲ, ಸುನಂದಾ ಬೆನ್ನೂರ, ಜಯಲಕ್ಷ್ಮೀ ಉಮಚಗಿ, ವಿಠ್ಠಲ್ ಖೈರೆ, ಎಂ.ಡಿ. ನದಾಫ ಸೇರಿದಂತೆ ಹಲವರಿದ್ದರು.