ಸಾರಾಂಶ
ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರ ಅಮಾನತಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಕುಷ್ಟಗಿತಾಲೂಕಿನ ನಿಡಶೇಸಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅವ್ಯವಸ್ಥೆ ಸರಿಪಡಿಸಿ, ಪ್ರಾಚಾರ್ಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಸಮಯದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಶಾಲೆಯಲ್ಲಿ ಸುಮಾರು 245 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೆನು ಪ್ರಕಾರ ಸರಿಯಾಗಿ ಊಟ ನೀಡುತ್ತಿಲ್ಲ. ಸಮರ್ಪಕವಾಗಿ ಶಿಕ್ಷಣ ನೀಡುತ್ತಿಲ್ಲ. ವಿದ್ಯಾರ್ಥಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ. ಶಾಲೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿದರು.ನಾವು ಸೌಕರ್ಯಗಳ ಬಗ್ಗೆ ಹಾಗೂ ತರಗತಿಗಳ ಕುರಿತು ಪ್ರಶ್ನೆ ಮಾಡಿದರೆ ಪ್ರಶ್ನಿಸಿದ ವಿದ್ಯಾರ್ಥಿಯನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಜಾತೀಯವಾಗಿ ಹಾಗೂ ಅಶ್ಲೀಲವಾಗಿ ನಿಂದಿಸುತ್ತಿದ್ದಾರೆ. ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಸರಿಯಾಗಿ ಪಾಠ ಮಾಡುವುದಿಲ್ಲ. ವಿಜ್ಞಾನ ಪ್ರಯೋಗಾಲಯ ಸರಿಯಾಗಿಲ್ಲ. ಸಮಾಜ ವಿಜ್ಞಾನ ಶಿಕ್ಷಕರಿಗೆ ಪಾಠ ಮಾಡಲು ಬರುವುದಿಲ್ಲ. ಸುಮ್ಮನೇ ಓದಿ ಹೋಗುತ್ತಾರೆ, ನಮಗೇನೂ ತಿಳಿಯುತ್ತಿಲ್ಲ. ಹೀಗಾದರೆ ನಮ್ಮ ಗತಿಯೇನು? ಕನ್ನಡ ಶಿಕ್ಷಕರೊಬ್ಬರು ತರಗತಿ ಕೊಠಡಿಯಲ್ಲಿ ಗುಟಖಾ ಸೇವನೆ ಮಾಡಿಕೊಂಡು ಪಾಠ ಮಾಡುತ್ತಾರೆ ಎಂದರು.
ನಮ್ಮ ಆರೋಗ್ಯ ದೃಷ್ಟಿಯಿಂದ ಸರ್ಕಾರದವರು ಒಳ್ಳೆಯ ಎಣ್ಣೆಯನ್ನು ಅಡುಗೆ ಮಾಡಲು ಕೊಟ್ಟರೆ ಇವರು ಖರ್ಚು ಉಳಿಸಲು ಕಡಿಮೆ ಗುಣಮಟ್ಟದ ರುಚಿಗೋಲ್ಡ್ ಎಣ್ಣೆಯನ್ನು ಅಡುಗೆಗೆ ಬಳಸುತ್ತಿದ್ದು, ಅಡುಗೆ ರುಚಿಸುವುದಿಲ್ಲ. ಅಡುಗೆ ರುಚಿ ಇಲ್ಲ ಎಂದು ಹೇಳಿದರೆ ನಮಗೆ ಬೆದರಿಕೆ ಹಾಕುತ್ತಾರೆ ಹಾಗೂ ಪ್ರಾಚಾರ್ಯರ ಪತಿಯು ಈ ವಸತಿ ನಿಲಯದ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪ್ರಶ್ನಿಸಿದ ವಿದ್ಯಾರ್ಥಿಗೆ ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿದ್ದಾರೆ ಎಂದು ಕಣ್ಣಿರಿಟ್ಟರು.ತರಗತಿಯಲ್ಲಿ ತಿಳಿಯದ ವಿಷಯಗಳ ಪರಿಹಾರಕ್ಕಾಗಿ ವಿಷಯ ಶಿಕ್ಷಕರ ಭೇಟಿಗೆ ಪ್ರಾಚಾರ್ಯರು ಅವಕಾಶ ನೀಡುತ್ತಿಲ್ಲ. ಯಾರಾದರೂ ಮೇಲಧಿಕಾರಿಗಳು ಭೇಟಿ ನೀಡಿದರೆ ಶಾಲೆಯಲ್ಲಿ ಏನೂ ಕೊರತೆ ಇಲ್ಲ. ಎಲ್ಲವೂ ಸರಿಯಾಗಿ ಇದೆ ಎಂದು ಹೇಳುವಂತೆ ಒತ್ತಡ ಹಾಕುತ್ತಾರೆ ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಕೆಲವು ಪಾಲಕರು ಸಾಥ್ ನೀಡಿದರು. ಪ್ರಾಚಾರ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಪ್ರಾಚಾರ್ಯೆ ಎಸ್.ಬಿ. ಸೌಭಾಗ್ಯ, ಇದು ಸುಮಾರು 30 ವರ್ಷಗಳ ಹಳೆಯ ಶಾಲೆ. ಕೆಲವೊಂದು ಸಮಸ್ಯೆಗಳಿವೆ. 8 ತಿಂಗಳಿನಿಂದ ಕರೆಂಟ್ ಬಿಲ್ ಬಿಡುಗಡೆಯಾಗಿಲ್ಲ. ದುರಸ್ತಿಗೆ ಅನುದಾನ ಅವಶ್ಯಕತೆ ಇದೆ. ಮೂಲಭೂತ ಸೌಲಭ್ಯಕ್ಕಾಗಿ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಕೆಲವು ಕೆಲಸಗಳನ್ನು ನಾನು ನನ್ನ ಸ್ವಂತ ದುಡ್ಡಿನಿಂದ ಮಾಡಿಸಿದ್ದೇನೆ. ಆದರೂ ನನ್ನ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಈ ಕೆಲಸ ಬಿಡಲು ಸಿದ್ಧನಿದ್ದೇನೆ ಎಂದು ಹೇಳಿದರು.ಅಧಿಕಾರಿಗಳು ಭೇಟಿ:
ಈ ವಿಷಯ ತಿಳಿದ ನಂತರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಚಂದ್ರ ಸಂಗನಾಳ, ಪಿಎಸ್‌ಐ ಮುದ್ದುರಂಗಸ್ವಾಮಿ, ಇಸಿಒ ತಿಮ್ಮಣ್ಣ ಹಿರೇವಳಿ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ವಿದ್ಯಾರ್ಥಿಗಳ ದೂರನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ ಎಂದರು.