ಹಾವೇರಿ: ಕಬ್ಬು ಬೆಳೆಗಾರರಿಂದ ಸಂಗೂರು ಕಾರ್ಖಾನೆ ಎದುರು ಪ್ರತಿಭಟನೆ

| Published : Jan 09 2024, 02:00 AM IST / Updated: Jan 09 2024, 05:31 PM IST

ಸಾರಾಂಶ

ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ತಾಲೂಕಿನ ಸಂಗೂರ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ತಾಲೂಕಿನ ಸಂಗೂರ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು.

ತಾಲೂಕಿನ ಸಂಗೂರು ಕಾರ್ಖಾನೆ ಎದುರು ಹಾವೇರಿ- ಹಾನಗಲ್ಲ ರಾಜ್ಯ ಹೆದ್ದಾರಿ ಬಂದ್ ಮಾಡಿ ನೂರಾರು ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಸಾಗಿಸಿ 45 ದಿನ ಕಳೆದರೂ ಕಾರ್ಖಾನೆ ಮಾಲೀಕರು ಕಬ್ಬು ಪೂರೈಸಿ ರೈತರಿಗೆ ಹಣ ಪಾವತಿ ಮಾಡದೇ ಸತಾಯಿಸುತ್ತಿದ್ದಾರೆ. ಜಿಎಂ ಶುಗರ್ಸ್ ಒಡೆತನದಲ್ಲಿ ನಡೆಯುತ್ತಿರುವ ಈ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ನೀಡಬೇಕಾದ ₹50 ಕೋಟಿಗೂ ಹೆಚ್ಚಿನ ಹಣ ಬಾಕಿ ಇಟ್ಟುಕೊಂಡಿದೆ. ಜಿಲ್ಲೆಯಲ್ಲಿ ಮಳೆ ಕೈಕೊಟ್ಟು ಬರಗಾಲ ಎದುರಾಗಿದ್ದು ರೈತರು ಜೀವನ ನಡೆಸುವುದೇ ಕಷ್ಟಕರವಾಗಿದೆ. 

ಇಂತಹ ಸಂದರ್ಭದಲ್ಲಿ ರೈತರು ಪೂರೈಸಿದ ಕಬ್ಬಿಗೆ ಕಾರ್ಖಾನೆ ಮಾಲೀಕರು ನಿಗದಿತ ಅವಧಿ ಒಳಗಾಗಿ ಹಣ ಪಾವತಿ ಮಾಡದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗುವಂತೆ ಮಾಡುತ್ತಿದ್ದಾರೆ. ಕೂಡಲೇ ರೈತರಿಗೆ ಬಾಕಿ ಹಣ ಪಾವತಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ವರ್ಷ ಒಂದು ಟನ್ ಕಬ್ಬಿಗೆ ₹3050 ದರ ನಿಗದಿ ಮಾಡಿದ್ದು, ಅದರಲ್ಲಿ ಅವರು ₹3024 ಗಳನ್ನು ಮಾತ್ರ ರೈತರಿಗೆ ಪಾವತಿ ಮಾಡುತ್ತಿದ್ದಾರೆ. ಇನ್ನುಳಿದ ₹26 ಗಳನ್ನು ಹಾಕಿರುವುದಿಲ್ಲ. 45 ದಿನ ಗತಿಸಿದರು ರೈತರಿಗೆ ಹಣ ಹಾಕದೇ ಈಗಾಗಲೇ ಎರಡು ಲಕ್ಷ ಎಪ್ಪತ್ತು ಸಾವಿರ ಟನ್ ಕಬ್ಬು ನೂರಸಿದ್ದು ಈವರೆಗೆ 80 ಸಾವಿರ ಟನ್ ಕಬ್ಬಿಗೆ ಮಾತ್ರ ಹಣ ಹಾಕಿದ್ದಾರೆ. ಇನ್ನು ಉಳಿದ ಒಂದು ಲಕ್ಷ ತೊಂಬತ್ತು ಸಾವಿರಕ್ಕೂ ಹೆಚ್ಚು ಟನ್ ಕಬ್ಬಿನ ಹಣ ಪಾವತಿ ಮಾಡಿಲ್ಲ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕೆಂದು ರೈತರು ಪಟ್ಟು ಹಿಡಿದರು. ಆಗ ಆಹಾರ ಇಲಾಖೆ ಉಪನಿರ್ದೇಶಕರು ಆಗಮಿಸಿ ಜಿಲ್ಲಾಡಳಿತದ ಪರವಾಗಿ ರೈತರ ಮನವಿ ಸ್ವೀಕರಿಸಿದರು. ನಂತರ ಅವರು ಜಿಲ್ಲಾಧಿಕಾರಿಗಳು ಹಾಗೂ ಶುಗರ್ ಕಮಿಷನರ್ ಅವರಿಗೆ ವಿಷಯ ತಿಳಿಸಿ ಒಂದು ವಾರದಲ್ಲಿ ಹಣ ಹಾಕಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು. ಆಗ ರೈತರು ಒಂದು ವಾರದೊಳಗೆ ಹಣ ಹಾಕದಿದ್ದರೆ, ಮತ್ತೆ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಬಸವಣ್ಣಪ್ಪ ಬೆಂಚಿಹಳ್ಳಿ, ಪಂಚಪ್ಪ ಹೆಗ್ಗಣನವರ, ಫಕೀರಪ್ಪ ಕುರಬರ, ರಾಜಶೇಖರ್ ಹಲಸೂರು, ರುದ್ರಪ್ಪ ಬಳಿಗಾರ, ರಮೇಶ ದಡ್ಡೂರ್, ಶಂಕರಗೌಡ ಪಾಟೀಲ, ಮಂಜುನಾಥ ಅಸುಂಡಿ, ಆರ್. ಹಿರೇಮಠ, ನಾಗಪ್ಪ ಸಜ್ಜನ, ನಾಗೇಂದ್ರ ಕೆಂಗೊಂಡ, ದಾನೇಶಪ್ಪ ಕೆಗೊಂಡ, ಎಂ.ಎನ್. ನಾಯಕ, ಬಸಪ್ಪ ನೆಗಳೂರ, ಶಿವಾನಂದಯ್ಯ ಸಂಗೂರಮಠ, ಚಂದ್ರು ವರ್ದಿ ಸೇರಿದಂತೆ ಇತರರು ಇದ್ದರು.