ಕಬ್ಬಿಗೆ ದರ ಘೋಷಿಸಿ ಕಾರ್ಖಾನೆಯವರು ಕಬ್ಬು ನುರಿಸಲು ಆರಂಭಿಸಬೇಕೆಂದು ಮುಧೋಳದಲ್ಲಿ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಕಬ್ಬಿನ ಬೆಲೆ ನಿಗದಿಪಡಿಸಿ (ಘೋಷಿಸಿ) ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕೆಂದು ಒತ್ತಾಯಿಸಿ ಮುಧೋಳ ತಾಲೂಕಿನ ರೈತರು ಬುಧವಾರ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ದಿಂದ ತಹಸೀಲ್ದಾರ್ ಕಚೇರಿಯವರೆಗೆ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಈ ವೇಳೆ ರೈತ ಮುಖಂಡರು ಮಾತನಾಡಿ, ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹4200 ದರ ನಿಗದಿ ಪಡಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆಯವರ ಜೊತೆ ಮಾತನಾಡಿ, ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಸೂಚಿಸಬೇಕೆಂದು ಒತ್ತಾಯಿಸಿದರಲ್ಲದೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಬೇಡಿಕೆಗಳನ್ನು ಆಲಿಸಿ ಸರ್ಕಾರಕ್ಕೆ ಒರದಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಬಾರದೇ ಇರುವುದರಿಂದ ಹೋರಾಟಗಾರರು ತಹಸೀಲ್ದಾರ್ ಕಚೇರಿಯಿಂದ ಮತ್ತೆ ಕಬ್ಬು ಹೋರಾಟ ಮಾಡುವ ಸ್ಥಳಕ್ಕೆ ಆಗಮಿಸಿ ತಮ್ಮ ಹೋರಾಟ ಮುಂದುವರಿಸಿದರು. ಸರ್ಕಾರ ಈ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ ಅವರು ಸರ್ಕಾರದ ಧೋರಣೆ ತೀವ್ರವಾಗಿ ಖಂಡಿಸಿದರು. ಇದನ್ನು ಗಮನಸಿದರೆ ಈ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಈಗ ಹೇಳಲು ಸಾಧ್ಯವಿಲ್ಲ. ಪ್ರತಿಭಟನಾ ಮೆರವಣಿಗೆ ಮಹಿಳೆಯರು ಸೇರಿದಂತೆ ನೂರು ರೈತರು ಭಾಗವಹಿಸಿದ್ದರು.