ತಾಲೂಕಿನ ತಲಮಾರಿ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಕಾರ್ಮಿಕರಿಗೆ ಬಾಕಿ ಹಣ ಹಾಗೂ ಸಾರಿಗೆ ವೆಚ್ಚವನ್ನು ಪಾವತಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

-ವಿಬಿಜಿ ರಾಮ್‌ ಜಿ ಯೋಜನೆಯಡಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ । ತಹಸೀಲ್ದಾರ್‌ಗೆ ಮನವಿ

--------

ಕನ್ನಡಪ್ರಭ ವಾರ್ತೆ ರಾಯಚೂರು

ತಾಲೂಕಿನ ತಲಮಾರಿ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಿ, ಕಾರ್ಮಿಕರಿಗೆ ಬಾಕಿ ಹಣ ಹಾಗೂ ಸಾರಿಗೆ ವೆಚ್ಚವನ್ನು ಪಾವತಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಹಳೇ ಡಿಸಿ ಕಚೇರಿ ಮುಂಭಾಗದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಹಾಯಕ ನಿರ್ದೇಶಕ ಹನುಮಂತರಾಯ ಮತ್ತು ತಲಮಾರಿ ಗ್ರಾಪಂ ಪಿಡಿಒ ವೆಂಕಟೇಶ ಅವರಿಗೆ ಮನವಿ ಸಲ್ಲಿಸಿದರು. ಮಾರ್ಚ್ ತಿಂಗಳಲ್ಲಿ ನರೇಗಾ ಯೋಜನೆಯಡಿ ಕೆಲಸ ಆರಂಭವಾದ ಸಂದರ್ಭದಲ್ಲಿ ಮಸ್ಟರ್ ರೋಲ್ ನೋಂದಣಿ, ಆನ್ಲೈನ್ ದಾಖಲಾತಿ, ವೇತನ ದಾಖಲೆ ಸೇರಿದಂತೆ ತಾಂತ್ರಿಕ ಕಾರಣಗಳಿಂದ ಹಲವು ಗೊಂದಲಗಳು ಉಂಟಾಗಿದ್ದವು. ಇದರ ಪರಿಣಾಮವಾಗಿ ರಿಹನುದ್ದಿನ್ ಗುಂಪಿನ ಕಾರ್ಮಿಕರಿಗೆ ಮಾಡಿದ ಕೆಲಸದ ಹಣ ಪಾವತಿಯಾಗಿಲ್ಲ. ಪಂಚಾಯಿತಿಗೆ ಭೇಟಿ ನೀಡಿದಾಗ ರೀ-ಎನ್‌ಎಂಆರ್ ಹಾಕಿ ಕೆಲಸ ನೀಡುವುದಾಗಿ ತಿಳಿಸಲಾಗಿತ್ತು. ಕೆಲಸವನ್ನು ಊರಿನ ಸಮೀಪದಲ್ಲೇ ನೀಡಬೇಕು. ಇಲ್ಲದಿದ್ದರೆ ಸುಮಾರು 25 ಕಿಮೀ ದೂರ ಹೋಗಬೇಕಾಗಿರುವುದರಿಂದ ಸಾರಿಗೆ ವೆಚ್ಚವನ್ನು ಪಂಚಾಯಿತಿ ಭರಿಸಬೇಕು ಎಂದು ಮನವಿ ಮಾಡಿದರು.

ಸಾರಿಗೆ ವೆಚ್ಚಕ್ಕೆ ಆಗ್ರಹ: ತಲಮಾರಿ ಗ್ರಾಪಂಯವರು ಪದೇ ಪದೇ ಇಡಪನೂರು ಗ್ರಾಮದಲ್ಲಿ ಕೆಲಸ ನೀಡುತ್ತಿರುವುದರಿಂದ, ತಲಮಾರಿಯಿಂದ ಇಡಪನೂರಿಗೆ ಹೋಗಿ ಬರಲು ಸುಮಾರು 25 ಕಿಮೀ ದೂರವಾಗುತ್ತದೆ. ಇದರಿಂದ ಕಾರ್ಮಿಕರಿಗೆ ಪ್ರತಿದಿನ ಸುಮಾರು 50 ರು. ಸಾರಿಗೆ ವೆಚ್ಚವಾಗುತ್ತಿದೆ. ಆದ್ದರಿಂದ ಸಾಧ್ಯವಾದಷ್ಟು ತಲಮಾರಿ ಗ್ರಾಮದ ವ್ಯಾಪ್ತಿಯಲ್ಲಿಯೇ ಕೆಲಸ ನೀಡಬೇಕು. ಅನಿವಾರ್ಯವಾಗಿ ಬೇರೆ ಗ್ರಾಮದಲ್ಲಿ ಕೆಲಸ ನೀಡಬೇಕಾದರೆ ಕಾರ್ಮಿಕರಿಗೆ ಸೂಕ್ತ ಸಾರಿಗೆ ವೆಚ್ಚವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ದಿನ ಹೆಚ್ಚಳಕ್ಕೆ ಆಗ್ರಹ: ಯೋಜನೆಯಡಿ ಒಂದು ಗುಂಪಿನ ಕಾರ್ಮಿಕರು ಎಷ್ಟು ಪ್ರಮಾಣದ ಕೆಲಸ ಮಾಡಬೇಕು ಎಂಬುದನ್ನು ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಪಷ್ಟವಾಗಿ ತಿಳಿಸಬೇಕು. ಮಣ್ಣು ಅಗೆಯುವುದರ ಜತೆಗೆ ತೆಗೆದ ಮಣ್ಣನ್ನು ಯಾವ ಸ್ಥಳದಲ್ಲಿ, ಎಷ್ಟು ಪ್ರಮಾಣದಲ್ಲಿ ಹಾಕಲಾಗಿದೆ ಎಂಬುದನ್ನೂ ಪರಿಗಣಿಸಿ ಸರಿಯಾದ ಅಳತೆ ನೀಡಬೇಕು. ಪದೇಪದೇ ಉಂಟಾಗುತ್ತಿರುವ ತಾಂತ್ರಿಕ ಹಾಗೂ ಆನ್ಲೈನ್ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು, ಈ ವರ್ಷ ಕರ್ನಾಟಕ ಸೇರಿದಂತೆ ರಾಯಚೂರು ಜಿಲ್ಲೆಯಲ್ಲಿಯೂ ತೀವ್ರ ಬರಗಾಲದ ಪರಿಸ್ಥಿತಿ ಇದೆ. ಕೃಷಿ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗದ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಬರಗಾಲದ ಪರಿಸ್ಥಿತಿಯನ್ನು ಪರಿಗಣಿಸಿ ವಿ.ಬಿ.ಜಿ. ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸುವಂತೆ ತಮ್ಮ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಅಧಿಕಾರಿಗಳು ಇನ್ನು ಎರಡು ದಿನದಲ್ಲಿ ವಾಹನದ ವೆಚ್ಚವನ್ನು ನೀಡಲಾಗುವುದು ಮತ್ತು ಜುಲೈ ತಿಂಗಳಲ್ಲಿ ಮಾಡಿದ ಕೆಲಸದ ಬಗ್ಗೆ ಹದಿನೈದು ದಿನಗಳಲ್ಲಿ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದರು.

ಹೋರಾಟದಲ್ಲಿ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸುಗುರು, ತಲಮಾರಿ ಗ್ರಾಮ ಘಟಕದ ಅಧ್ಯಕ್ಷ ಫಾರೂಕ್, ಉಪಾಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಯದರ್ಶಿ ರಿಹನುದ್ದೀನ್ ಸೇರಿ ಕೂಲಿ ಕಾರ್ಮಿಕರು ಇದ್ದರು.

--------------------

19ಕೆಪಿಆರ್‌ಸಿಆರ್‌ 02: ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಎಐಕೆಕೆಎಂಎಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.