ಅರಣ್ಯ ಸಿಬ್ಬಂದಿ ವರ್ತನೆ ಖಂಡಿಸಿ ಕುರಿಗಾಹಿಗಳಿಂದ ಪ್ರತಿಭಟನೆ

| Published : Jan 18 2024, 02:03 AM IST

ಅರಣ್ಯ ಸಿಬ್ಬಂದಿ ವರ್ತನೆ ಖಂಡಿಸಿ ಕುರಿಗಾಹಿಗಳಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಕುರಿಗಾಹಿಗಳು ಕುರಿ ಮೇಯಿಸಲು ಬಂದಾಗ ಅರಣ್ಯ ಸಿಬ್ಬಂದಿ ಹಫ್ತಾ ನೀಡಲು ಬೇಡಿಕೆ ಇಟ್ಟಿದ್ದಾರೆ.

ಕಲಘಟಗಿ: ಸಂಚಾರಿ ಕುರಿಗಾಹಿಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸುವಾಗ ನಮಗೆ ಒಂದು ಕುರಿ ಕೊಡಿ, ಇಲ್ಲ ಹಫ್ತಾ ನೀಡಬೇಕು ಎಂದು ಬೇಡಿಕೆ ಇಟ್ಟ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!

ಕಲಘಟಗಿ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಕುರಿಗಾಹಿಗಳು ಕುರಿ ಮೇಯಿಸಲು ಬಂದಾಗ ಅರಣ್ಯ ಸಿಬ್ಬಂದಿ ಆನಂದ ಮನಗಣ್ಣವರ ಹಾಗೂ ಕುರಿಗಾಹಿ ಬೀರಪ್ಪ ಜಡಗಪ್ಪಗೋಳ ಅವರ ನಡುವೆ ನಡೆದ ಮಾತಿನ ಚಕಮಕಿಯ ಆಡಿಯೋ ಇದು.

ನಂತರ ಕುರಿಗಾಹಿ ಬೀರಪ್ಪ ಅವರು ಸೆಲ್ಫಿ ವಿಡಿಯೋ ಮಾಡಿ ‘ನಮಸ್ಕಾರ... ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಮಸಳಿಕಟ್ಟಿ ಪ್ರದೇಶದ ಸಿಪಾಯಿಯೊಬ್ಬರು ನಮ್ಮ ಮೇಲೆ ದಬ್ಬಾಳಿಕೆ ಮಾಡಿ, ಅವರಿಗೆ ನಾವು ಅರ್ಧ ದರಕ್ಕೆ ಕುರಿ ಹಾಗೂ ಹಫ್ತಾ ನೀಡಬೇಕಂತೆ. ತೊಂದರೆ ಕೊಡುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರಿಗೆ ಎಲ್ಲರಿಗೂ ಶೇರ್ ಮಾಡಿ’ ಎಂದು ಅಳಲು ತೋಡಿಕೊಂಡಿದ್ದಾರೆ.

ಕುರಿಗಾಹಿಗೆ ನಮ್ಮ ಅರಣ್ಯ ಪಾಲಕರು ಮಾತನಾಡಿದ ಅಸಭ್ಯ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾರ್ವಜನಿಕರಿಗೆ ಈ ರೀತಿಯ ದುರ್ವರ್ತನೆಯು ಕಾನೂನು ಬಾಹಿರವಾಗಿರುತ್ತದೆ. ಈಗ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಅರುಣಕುಮಾರ್ ಅಷ್ಟಗಿ ತಿಳಿಸಿದರು.

ನ್ಯಾಯಕ್ಕಾಗಿ ಪ್ರತಿಭಟನೆ:

ಸೂಳಿಕಟ್ಟಿ ಗ್ರಾಮದ ಅರಣ್ಯ ಪ್ರದೇಶದ ರೈತರ ಜಮೀನಿನಲ್ಲಿ ಕುರಿಗಾಹಿ ಜತೆ ಅರಣ್ಯ ಇಲಾಖೆ ಸಿಬ್ಬಂದಿ ಅನುಚಿತ ವರ್ತನೆ ಖಂಡಿಸಿ ಪಟ್ಟಣದ ವಲಯ ಅರಣ್ಯ ಇಲಾಖೆ ಮುಂದೆ ಬುಧವಾರ ಕುರಿಗಾಹಿಗಳು ಪ್ರತಿಭಟನೆ ನಡೆಸಿದರು.

ಅರಣ್ಯ ಸಿಬ್ಬಂದಿ ಆನಂದ ಮನಗಣ್ಣವರ ಎಂಬುವವರು ನಮ್ಮ ಕಡೆ ಕುರಿ ವ್ಯಾಪಾರಕ್ಕಾಗಿ ಬಂದು ಚರ್ಚಿಸಿ ಅರ್ಧ ದರಕ್ಕೆ ಕುರಿ ಕೇಳಿದ್ದಾರೆ. ಒಪ್ಪದಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದರು.

ಅಶ್ಲೀಲ ಪದ ಬಳಕೆ ಮಾಡಿ ಬೈದಾಡಿ ನಮಗೆ ಅವಮಾನ ಮಾಡಿದ್ದಾರೆ. ಅರಣ್ಯದಲ್ಲಿ ಕುರಿ ಬಿಟ್ಟರೆ ನಿಮ್ಮ ಕುರಿ ತೆಗೆದುಕೊಂಡು ಹೋಗುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಇವರ ಮೇಲೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಕುರಿ ಗಾಹಿಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೀರಪ್ಪ ಜಡಗಪ್ಪಗೋಳ, ಭೀಮಪ್ಪ ತುಳಜ್ಜನವರ, ಸಿದ್ದಪ್ಪ ಚಂದರಗಿ, ಸಿದ್ರಾಯ ಲೋಕೂರ, ಹನುಮಂತ ಜವಳಿ, ಈರಪ್ಪ ಗೊಡಚಿ, ಶಂಕರ ಬಾಣಸೆ, ಮಹಾಂತೇಶ ಶಿವಣ್ಣವರ, ತಮ್ಮಣ್ಣ ಸನದೂಳಿ ಇತರರು ಇದ್ದರು.